ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾದರೆ, ಇನ್ನು ಕೆಲವು ಭಾಗಗಳಲ್ಲಿ ಮಕ್ಕಳ ಕೊರತೆ ಇದೆ. ಇಲಾಖೆಗೆ ಇದೊಂದು ವಿಚಿತ್ರ ಅಗ್ನಿಪರೀಕ್ಷೆ. ಇವೆರಡನ್ನೂ ಸಮತೋಲನಗೊಳಿಸಲು ಇರುವ ಉಪಾಯಗಳ ಬಗ್ಗೆ ಇಲಾಖೆ ಹಲವಾರು ರೀತಿಯ ಯೋಚನೆ ಮಾಡುತ್ತಿದೆ. ಗ್ರಾಮ ಪಂಚಾಯತಿಗೊಂದು ಮಾದರಿ ಶಾಲೆಯ ಚಿಂತನೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ ಹೇಳಿದರು.
ನಾವುಂದ ಪದವಿ ಪೂರ್ವ ಕಾಲೇಜಿನಲ್ಲಿ 1.20 ಕೋಟಿ ವೆಚ್ಚದಲ್ಲಿ ನೂತನ ನಿರ್ಮಾಣಗೊಂಡ ಆರು ತರಗತಿ ಕೋಣೆಗಳ ಸುಸಜ್ಜಿತ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಪ್ರಸ್ತುತ ಶೈಕ್ಷಣಿಕ ಕ್ಷೇತ್ರದಲ್ಲಿ ಕಟ್ಟ ಕಡೆಯ ಮಗುವಿಗೂ ಗುಣಾತ್ಮಕ ಶಿಕ್ಷಣ ದೊರೆಯ ಬೇಕೇಂಬ ನೆಲೆಯಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸ್ಪಂದಿಸುತ್ತಿದೆ. ಕೋವಿಡ್ ನಂತರ ಹಣಕಾಸಿನ ಸ್ಥಿತಿ ಸ್ವಲ್ಪಮಟ್ಟಿನ ಸುಧಾರಣೆ ಇರುವುದರಿಂದ ಸರ್ಕಾರ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂದರು.
ಉತ್ತಮ ಶಿಕ್ಷಣ ಪಡೆದ ವ್ಯಕ್ತಿ ತನ್ನ ಬಗ್ಗೆ ಮಾತ್ರ ಯೋಚಿಸುವುದನ್ನು ಕೆಲವು ಕಡೆಗಳಲ್ಲಿ ಕಾಣಬಹುದಾಗಿದೆ. ಇನ್ನೊಂದು ಕಡೆ ಮೌಲ್ಯಾಧಾರಿತ ಶಿಕ್ಷಣ ಸಿಗುತ್ತಿಲ್ಲವೇನೋ ಎಂಬ ಭಾವನೆಯೂ ಇದೆ. ಸ್ವಾವಲಂಬಿ ಹಾಗೂ ಸ್ವಾಭಿಮಾನಿಯಾಗಿ ಬದುಕಬೇಕೆಂಬ ನೆಲೆಯಲ್ಲಿ ಶಿಕ್ಷಣ ನೀಡಬೇಕೆಂದು ಸ್ವಾತಂತ್ರ್ಯಾ ಪೂರ್ವದ ಯೋಚನೆಯಾಗಿತ್ತು. ಆದರೆ ಈಗಿನ ಕಾಲಘಟ್ಟದಲ್ಲಿ ಇವೆರಡೂ ಆಗದೇ ಉದ್ಯೋಗಕ್ಕಾಗಿ ಅರ್ಜಿ ಹಿಡಿದು ಪರಾವಲಂಬಿಯಾಗುತ್ತಿರುವುದು ವಿಪರ್ಯಾಸ. ಕೆಲವು ಕಡೆಗಳಲ್ಲಿ ಕೆಲಸಕ್ಕೆ ಬೇಕು ಎಂಬ ಆಹ್ವಾನ, ಇನ್ನೊಂಡೆದೆಡೆ ಬಯಸಿದ ಕೆಲಸ ಬೇಕು ಎನ್ನುವ ವರ್ಗ. ಹೀಗೆ ಇವೆರಡರ ಮಧ್ಯ ಸಂಬಧವಿಲ್ಲದ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ. ಈ ಕಾರಣಕ್ಕೆ ಪ್ರಧಾನಿಯವರು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಸ್ವದೇಶಿ ನೀತಿಗೆ ಒತ್ತು ನೀಡುವುದು ಹಾಗೂ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವುದು ಇದರ ಉದ್ದೇಶವಾಗಿದೆ ಎಂದರು.
ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಅರುಣ್ ನಾಯಕ್, ಉಪಪ್ರಾಂಶುಪಾಲೆ ಶಶಿಕಲಾ ನಾಯಕ್, ಪದವಿಪೂರ್ವ ಶಿಕ್ಷಣ ಉಪನಿರ್ದೇಶಕ ಮಾರುತಿ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಎನ್. ಎಚ್. ನಾಗೂರ್, ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ವೇದಮೂರ್ತಿ, ಪಿಡ್ಲ್ಯೂಡಿ ಇಇ ದುರ್ಗಾದಾಸ್, ಸಚಿವ ಆಪ್ತ ಕಾರ್ಯದರ್ಶಿ ಎ. ಆರ್. ರವಿ, ಪೌಢಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಉಪಸ್ಥಿತರಿದ್ದರು. ರಾಜಶೇಖರ್ ಸ್ವಾಗತಿಸಿ, ಗಣೇಶ್ ಎಂ. ಕಾರ್ಯಕ್ರಮ ನಿರ್ವಹಿಸಿದರು.
► ಸಂಘಟನೆ ಬಲಿಷ್ಠವಾದರೆ ಇತಿಹಾಸ ಬದಲಿಸಲು ಸಾಧ್ಯ: ಶಿಕ್ಷಣ ಸಚಿವ ಬಿ. ಸಿ. ನಾಗೇಶ್ – https://kundapraa.com/?p=53262 .