ಭಾಷೆಯೊಂದಿಗೆ ಸಂಸ್ಕೃತಿ ಉಳಿಸಿ ರಾಷ್ಟ್ರ ಪ್ರೇಮ ಮೊಳಗಲಿ-ಕೆ.ಆರ್. ಹೆಬ್ಬಾರ್
ಕುಂದಾಪುರ: ದೇಶದಲ್ಲಿ 1800 ಕ್ಕೂ ಹೆಚ್ಚು ಭಾಷೆಗಳಿವೆ. ಕೇವಲ 22 ಭಾಷೆಗಳು ಮಾತ್ರ ಸಂವಿಧಾನದಿಂದ ಮಾನ್ಯತೆ ಪಡೆದಿದೆ. ಅಲ್ಲಲ್ಲಿ ಸ್ವಾರ್ಥ ಭಾವದಿಂದ ಹಿಂದಿ ಭಾಷೆಯ ಬೆಳವಣಿಗೆಯ ಬಗ್ಗೆ ಅಪಸ್ವರದಿಂದ ದೇಶದ ಐಕ್ಯತೆ, ಭಾವಕೈಕ್ಯತೆಯ ಸಹಭಾಳ್ವೆಗೆ ಮಾರಕವಾಗಿದೆ ಎಂದು ನಿವೃತ್ತ ಹಿರಿಯ ಹಿಂದಿ ಶಿಕ್ಷಕ ಕೆ.ಆರ್.ಹೆಬ್ಬಾರ್ ಹೇಳಿದರು.
ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ, ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಉಡುಪಿ, ಜನತಾ ಪ.ಪೂ,ಕಾಲೇಜು ಹೆಮ್ಮಾಡಿ ಹಾಗೂ ಹರೆಗೋಡು ಮಹಾ ವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇಂಗ್ಲೀಷ್ ಇಲ್ಲದಿದ್ದರೆ ವೈಜ್ಞಾನಿಕ ಬೆಳವಣಿಗೆ ಇಲ್ಲ ಎಂಬ ಮಾತು ಸುಳ್ಳು, ಬೇರೆ ಬೇರೆ ರಾಷ್ಟ್ರಗಳು ತಮ್ಮ ರಾಷ್ಟ್ರ ಭಾಷೆಯಿಂದಲೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನು ಮೀರಿ ಸಾಧನೆ ಮಾಡಿದ್ದು ದೃಷ್ಟಾಂತ ಇದೆ. ಭಾಷೆಯ ಉಳಿವಿಗಾಗಿ ಇತ್ತೀಚಿನ ದಿನಗಳಲ್ಲಿ ಯುವ ಜನರನ್ನು ದಾರಿ ತಪ್ಪಿಸುವ ಪ್ರೇಮಿಗಳ ದಿನಾಚರಣೆ, ಕಾಲಹರಣದ ಚಳುವಳಿ ಮತ್ತು ಹೋರಾಟದಿಂದ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಉಂಟಾಗಿ ರಾಷ್ಟ್ರ ಪ್ರೇಮ ದೂರವಾಗುತ್ತಿದೆ ಎಂದು ಖೇಧ ವ್ಯಕ್ತ ಪಡಿಸಿದರು.
ಹೆಮ್ಮಾಡಿ ಗ್ರಾಮ ಪಂ ಅಧ್ಯಕ್ಷೆ ಜ್ಯೋತಿ ಹರೀಶ್ ಭಂಡಾರಿ ಮತ್ತು ಅನುಸೂಯ ಆಚಾರ್ಯ ಜಂಟಿಯಾಗಿ ಕಾರ್ಯಕ್ರಮವನ್ನು ಉಧ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹೆಮ್ಮಾಡಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬಿ.ಮೋಹನ ದಾಸ ಶೆಟ್ಟಿ, ಹರೆಗೋಡು ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ್.ಡಿ.ಎಚ್ ಉಪಸ್ಥಿತರಿದ್ದರು. ನೆಹರು ಯುವ ಕೇಂದ್ರದ ಜಿಲ್ಲಾ ಸಲಹೆಗಾರ ನರಸಿಂಹ ಗಾಣಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಜೆಸ್ಸಿ ಡಿಸಿಲ್ವ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಚಂದನ ನೆಂಪು ಕಾರ್ಯಕ್ರಮ ನಿರೂಪಿಸಿದರು. ಗಣಕ ಶಾಸ್ತ್ರ ಉಪನ್ಯಾಸಕ ಹರೀಶ್ ಕಾಂಚನ್ ವಂದಿಸಿದರು