ಕುಂದಾಪುರ: ವರ್ತಮಾನದ ಬೇಡಿಕೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಸಮಾಜ ವಿಜ್ಞಾನದ ಎಲ್ಲಾ ಚಟುವಟಿಕೆಗಳು ಸಮಾಜದಲ್ಲಿ ಉತ್ತಮ ಬದುಕು ರೂಪಿಸಿಕೊಡಲು ಸಾದ್ಯವಾಯಿತು. ಈ ನಿಟ್ಟಿನಲ್ಲಿ ಭೂತಕಾಲದ ಉತ್ತಮ ವಿಚಾರಗಳನ್ನು ವಿದ್ಯಾರ್ಥಿ ದಿಸೆಯಲ್ಲಿ ಎಲ್ಲರೂ ತಿಳಿದು ಕೊಳ್ಳಬೇಕಾಗಿದೆ ಎಂದು ಬೈಂದೂರು ಸರಕಾರಿ ಪ.ಪೂ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆಂಚನೂರು ಪ್ರದೀಪ ಕುಮಾರ್ ಶೆಟ್ಟಿ ಹೇಳಿದರು.
ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ರಾಜ್ಯದ ಸ್ಥಿತಿಗತಿ’ಗಳ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.
ಜಾತ್ಯಾತೀತ ಮತ್ತು ಅಹಿಂಸಾ ತತ್ವದ ಆಧಾರದ ಮೇಲೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದರಿಂದ ಭಾರತ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ಉತ್ತಮ ಮೌಲ್ಯಗಳಿಂದ ಎಲ್ಲಾ ರಾಷ್ಟ್ರಗಳಿಗೂ ಮಾದರಿಯಾಗಿದೆ. ಆದರೆ, ಕೆಲವೊಂದು ರಾಜ್ಯಗಳು ಧರ್ಮಾದರಿತ ರಾಜಕಾರಣದಿಂದ ತಮ್ಮ ಮೌಲ್ಯಗಳನ್ನು ಕಳೆದುಕೊಂಡು ರಾಜ್ಯದ ಸ್ಥಿತಿಗತಿ ಅಧಪತನದತ್ತಾ ಸಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಉಪನ್ಯಾಸಕಿ ಗಿರಿಜಾ ಕೊಡೇರಿ ಸ್ವಾಗತಿಸಿದರು. ಸುಜಾತ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಜೋಗಿ ವಂದಿಸಿದರು.