ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಫಿಟ್ ಇಂಡಿಯಾ ಅಭಿಯಾನಕ್ಕೆ ಪ್ರಧಾನಮಂತ್ರಿ ಕರೆಕೊಟ್ಟಿದ್ದು ಈ ಮೂಲಕ ಎಲ್ಲರೂ ಸದೃಢರಾಗಬೇಕಾದ ಅಗತ್ಯವನ್ನು ತಿಳಿಸಲಾಗಿದೆ. ಉತ್ತಮ ಆರೋಗ್ಯದೊಂದಿಗೆ ಜೀವನ ನಡೆಸುವುದು ಬಹುಮುಖ್ಯವಾದುದು ಎಂದು ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು ಹೇಳಿದರು.
ಯುವ ಮೆರಿಡಿಯನ್ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಕುಂದಾಪುರ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ಭಾನುವಾರ ನಡೆದ ‘ಯುವ ಸೈಕ್ಲೊತಾನ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈಕಲ್ ಜಾಥಾಕ್ಕೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಮೆರಿಡಿಯನ್ ಸಂಸ್ಥೆ ಆಡಳಿತ ಪಾಲುದಾರರಾದ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಯುವ ಸಮುದಾಯವನ್ನು ಪಿಟ್ನೆಸ್’ನತ್ತ ಸೆಳೆಯುವಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಕೊರೋನಾದಿಂದ ಒಂದೂವರೆ ವರ್ಷಗಳಿಂದ ಜನರು ಫಿಟ್ನೆಸ್ಸಿನಿಂದ ದೂರವಿದ್ದು ಅವರನ್ನು ಮತ್ತೆ ಆರೋಗ್ಯ ಕಾಳಜಿಯತ್ತ ಸೆಳೆಯುವ ಜೊತೆಗೆ ಮಾನಸಿಕವಾಗಿ, ದೈಹಿಕವಾಗಿ ಸದೃಢರನ್ನಾಗಿಸಿ ಫಿಟ್ನೆಸ್ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.
ಕುಂದಾಪುರ ನಗರದಲ್ಲಿ ಸಂಚರಿಸಿದ ಸೈಕಲ್ ಜಾಥಾ ಕಾಳಾವರದ ಯುವ ಮೆರಿಡಿಯನ್ ಅಮ್ಯೂಸ್ಮೆಂಟ್ ಪಾರ್ಕ್ ತನಕ ಸಾಗಿ ಬಂತು. ಸೈಕಲ್ ಜಾಥಾದಲ್ಲಿ ಮಕ್ಕಳು, ಹಿರಿಯರು, ಯುವತಿಯರ ಸಹಿತ ನೂರಾರು ಮಂದಿ ಭಾಗಿಯಾಗಿದ್ದರು. ಅಲ್ಲಿಂದ ಮತ್ತೆ ಕುಂದಾಪುರ ಶಾಸ್ತ್ರೀ ವೃತ್ತಕ್ಕೆ ಸಾಗಿ ಸಮಾಪನಗೊಂಡಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಲಕ್ಕಿ ಡ್ರಾ ಮೂಲಕ ವಿಶೇಷ ಬಹುಮಾನಗಳನ್ನು ನೀಡಲಾಗಿತ್ತು. ಮಾತ್ರವಲ್ಲ ಸೈಕ್ಲಿಂಗ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಒಂದನ್ನು ಲಕ್ಕಿ ಡ್ರಾದಲ್ಲಿ ಬಂಪರ್ ಬಹುಮಾನವಾಗಿ ನೀಡಲಾಗಿದ್ದು ಕುಂದಾಪುರದ ಶ್ರವಣ್ ಕುಮಾರ್ ಬಹುಮಾನ ಪಡೆದರು.
ಯುವ ಮೆರಿಡಿಯನ್ ಅಮ್ಯೂಸ್ಮೆಂಟ್ ಪಾರ್ಕ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಮೆರಿಡಿಯನ್ ಸಂಸ್ಥೆಯ ಆಡಳಿತ ಪಾಲುದಾರರಾದ ಉದಯ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಎಫ್.ಎಸ್.ಎಲ್. ಇಂಡಿಯಾದ ಅಧ್ಯಕ್ಷ ರಾಕೇಶ್ ಸೋನ್ಸ್, ಉದ್ಯಮಿ ಸಟ್ವಾಡಿ ವಿಜಯ ಕುಮಾರ್ ಶೆಟ್ಟಿ, ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ, ಪ್ರೊಬೇಶನರಿ ಪಿಎಸ್ಐ ಜಯಶ್ರೀ, ಸಹಾಯಕ ಉಪನಿರೀಕ್ಷಕ ಸುಧಾಕರ್, ಕುಂದಾಪುರ ಕಲಾಕ್ಷೇತ್ರದ ಕಿಶೋರ್ ಕುಮಾರ್, ಸೈಕ್ಲಿಂಗ್ ಕ್ಲಬ್ ಮುಂದಾಳುಗಳಾದ ಸದಾನಂದ ನಾವಡ, ಪ್ರವೀಣ್ ಇದ್ದರು.