ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು, ಹೆಣ್ಣು ಮಕ್ಕಳ ರಕ್ಷಣೆಯು ನಿರಂತರವಾಗಿ ನಡೆಯಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಜೆ. ಎನ್. ಸುಬ್ರಮಣ್ಯ ಹೇಳಿದರು.
ಅವರು ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ, ಆರೋಗ್ಯ ಇಲಾಖೆ, ಉಡುಪಿ,ಚೈಡ್‌ಲೈನ್ 1098 ಉಡುಪಿ, ರೋಟರಿ ಉಡುಪಿ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಭೂಮಿಗೆ ಬರುವ ಮುಂಚೆಯೇ ಅವರನ್ನು ನಾಶ ಮಾಡುವ ಪ್ರಯತ್ನಗಳು ನಡಯುತ್ತಿದ್ದು, ಅಂತಹ ಪ್ರಯತ್ನಗಳನ್ನು ತಡೆಯಬೇಕು, ಗರ್ಭಪೂರ್ವ ಮತ್ತು ಪ್ರಸವ ಪೂರ್ವದಲ್ಲಿ ಭ್ರೂಣ ಲಿಂಗ ಪತ್ತೆ ಮಾಡುವುದು ಮತ್ತು ಅದರ ನಾಶಕ್ಕೆ ಪ್ರಯತ್ನಿಸುವವರ ವಿರುದ್ದ ಕಠಿಣ ಶಿಕ್ಷೆ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದ್ದರೂ ಸಹ, ನ್ಯಾಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಪ್ರಕರಣಗಳು ದಾಖಲಾಗಿರುವ ಮತ್ತು ಶಿಕ್ಷೆ ವಿಧಿಸಿರುವ ಸಂಖ್ಯೆ ಅತ್ಯಂತ ಕಡಿಮೆ ಎಂದು ವಿಷಾದ ವ್ಯಕ್ತಪಡಿಸಿದ ಜಿಲ್ಲಾ ನ್ಯಾಯಧೀಶರು, ಸಂಬಂದಪಟ್ಟ ಇಲಾಖೆಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ, ಹೆಣ್ಣು ಮಕ್ಕಳ ನಾಶಕ್ಕೆ ಯತ್ನಿಸುವವರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿದ ಅವರು, ಸಾರ್ವಜನಿಕರೂ ಸಹ ಈ ಬಗ್ಗೆ ಅರಿವು ಹೊಂದಿರಬೇಕು ಎಂದರು.
ಅಕ್ಟೋಬರ್ 2 ರಿಂದ ನವೆಂಬರ್ 14 ರ ವರೆಗೆ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಕಾನೂನು ನೆರವು ಮತ್ತು ಅರಿವು ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ಪ್ರತೀ ಗ್ರಾಮದಲ್ಲಿ ಕನಿಷ್ಠ ೨ ಬಾರಿ ಕಾರ್ಯಕ್ರಮ ನಡೆಯುತ್ತಿದ್ದು, ಸಾರ್ವಜನಿಕರು ಕಾನೂನಿನ ಅರಿವು ಹೊಂದುವುದರ ಜೊತೆಗೆ, ಅಗತ್ಯ ನೆರವು ಪಡೆಯುವಂತೆ ನ್ಯಾ. ಜೆ. ಎನ್. ಸುಬ್ರಮಣ್ಯ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹೆಣ್ಣುಮಕ್ಕಳು ಇಂದೂ ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ತೋರುತ್ತಿದ್ದಾರೆ, ಅವರಿಗೆ ಸೂಕ್ತ ಅವಕಾಶ ನೀಡಬೇಕು, ಡಿಜಿಟಲ್ ರಂಗ ಸೇರಿದತೆ ಎಲ್ಲಾ ರಂಗದಲ್ಲಿ ಸಮಾನತೆ ಒದಗಿಸಿದಲ್ಲಿ ಇನ್ನೂ ಅತ್ಯುತ್ತಮ ಸಾಧನೆ ಮಾಡಲಿದ್ದು, ಸಮಾನತೆ ಒದಗಿಸುವ ಕಾರ್ಯವು ಮನೆಗಳಿಂದಲೇ ಆರಂಭವಾಗಬೇಕು. ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳ ಕುರಿತಂತೆ 1098 ಉಚಿತ ಸಹಾಯವಾಣಿಗೆ ಕರೆ ಮಾಡುವ ಮೂಲಕ ಅಗತ್ಯ ನೆರವು ಪಡೆಯಬಹುದಾಗಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ವಿಶೇಷ ಸಾಧನೆ ಮಾಡಿದ ಕು. ಅರ್ಚನಾ ಮತ್ತು ತನುಶ್ರೀ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಶಾಲಾ ಮಕ್ಕಳಿಗೆ ಕಿಟ್ ಗಳನ್ನು ವಿತರಿಸಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಮಕ್ಕಳ ಕಲ್ಯಾಣ ಸಮಿತಿ ಮಾಜಿ ಅಧ್ಯಕ್ಷ ರೋ. ನಾರಾಯಣ, ಇಂದಿರಾನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ಸಾಲಿನ್ಸ್ ಉಪಸ್ಥಿತರಿದ್ದರು.
ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಕುರಿತು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಉಪನ್ಯಾಸ ನೀಡಿದರು. ಚೈಡ್‌ಲೈನ್ ಆಪ್ತ ಸಹಾಯಕಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಅಧ್ಯಕ್ಷ ರೋ.ಹೇಮಂತ ಯು ಕಾಂತ್ ಸ್ವಾಗತಿಸಿದರು. ಉಡುಪಿ ಚೈಡ್‌ಲೈನ್ ನಿರ್ದೇಶಕ ರೋ. ರಾಮಚಂದ್ರ ಉಪಾಧ್ಯಾಯ ನಿರೂಪಿಸಿದರು, ಚೈಡ್‌ಲೈನ್ ಸಹಾಯಕ ನಿರ್ದೇಶಕ ರೋ. ಗುರುರಾಜ ಭಟ್ ವಂದಿಸಿದರು.