ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ, ವಿಶ್ವ ಮಾನಸಿಕ ಆರೋಗ್ಯ ದಿನ ಹಾಗೂ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯ ಹಿನ್ನಲೆಯಲ್ಲಿ ರಾಷ್ಟ್ರಮಟ್ಟದ ಸೆಮಿನಾರ್‌ನ್ನು ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲೆ ಡಾ. ವನಿತ ಶೆಟ್ಟಿ, ಮಹಿಳೆಯು ಸಮಾಜದಲ್ಲಿ ವಿಭಿನ್ನ ಪಾತ್ರ ನಿರ್ವಹಿಸುತ್ತಾಳೆ. ಇಂದು ಮಹಿಳೆಯ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಆದರೆ ಜೀವವನ್ನು ನೀಡಿ ಸಲಹುವ ಹೆಣ್ಣಿಗೆ ಇಂದಿನ ಸಮಾಜದಲ್ಲಿ ರಕ್ಷಣೆ ಇಲ್ಲದಾಗಿರುವುದು ದುರಂತ ಎಂದರು.
ಮಂಗಳೂರಿನ ಎ. ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಸೆಂಟರ್‌ನ ಪ್ರಾಧ್ಯಾಪಕಿ ಡಾ. ವತ್ಸಲ ಕಾಮತ್, ಶಿವಮೊಗ್ಗದ ಮಾನಸ ಆಸ್ಪತ್ರೆಯ ಆಪ್ತ ಸಮಾಲೋಚಕಿ ಹಾಗೂ ಸಮಾಜಕಾರ್ಯ ವಿಭಾಗದ ಹಿರಿಯ ವಿದ್ಯಾರ್ಥಿನಿ ಅಚಲ ಪಟೇಲ್ ಕ್ರಮವಾಗಿ ಲಿಂಗ ಸಮಾನತೆ ಮತ್ತು ಮಾನಸಿಕ ಆರೋಗ್ಯದ ಕುರಿತು ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಹಾಗೂ ವಿವಿಧ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಡಾ ಶೆರ್ಲಿ ಬಾಬು ಪ್ರಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಮೂಕಾಂಬಿಕ ವಂದಿಸಿ, ವಿದ್ಯಾರ್ಥಿನಿ ಎಲ್ವಿಶ ನಿರೂಪಿಸಿದರು.