ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಒಂದು ದಶಕದಿಂದ ಜನಮನ ರಂಜಿಸಿದ ಇನಿದನಿ ಕಾರ್ಯಕ್ರಮ ಜನವರಿ 9ಕ್ಕೆ ನಿಗದಿಯಾಗಿದೆ. ಕಲಾಕ್ಷೇತ್ರ-ಕುಂದಾಪುರ ಕಛೇರಿಯಲ್ಲಿ ಇನಿದನಿ ದಿನಾಂಕ ನಿಗದಿ ಪಡಿಸಿದ ಗಣ್ಯರು ಕಾರ್ಯಕ್ರಮದ ತಯಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರು ಕುಂದಾಪುರ ಹಲವು ಪ್ರಥಮಗಳಿಗೆ ಕಾರಣವಾದ ಇತಿಹಾಸವಿದೆ. ಅದಕ್ಕೆ ಇನಿದನಿಯೂ ಸೇರ್ಪಡೆಯಾಗಿದೆ. ಅಷ್ಟೊಂದು ಸಂಖ್ಯೆಯಲ್ಲಿ ಸಂಗೀತ ಕಲಾಸಕ್ತರು 4-5 ಗಂಟೆ ಕುಳಿತು ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಅಂತಾದರೆ ಅದರ ಸೆಳೆತಕ್ಕೆ ಇನಿದನಿಯ ಗುಣಮಟ್ಟವೇ ಕಾರಣವಾಗಿದೆ. ಹಾಗಾಗಿ ಇನಿದನಿ ಪ್ರಸ್ತುತಿ ಮಾಡುವ ಕಲಾಕ್ಷೇತ್ರ-ಕುಂದಾಪುರ, ಕುಂದಾಪುರಕ್ಕೊಂದು ಹೆಮ್ಮೆಯ ಸಂಸ್ಥೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು. ಡಾ. ಆದರ್ಶ ಹೆಬ್ಬಾರ್ ಮಾತನಾಡುತ್ತಾ ನಾನು ವೃತ್ತಿಯಲ್ಲಿ ವೈದ್ಯ, ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಸನ್ನಿವೇಶಗಳು ಬಹಳಷ್ಟು ಇರುತ್ತದೆ. ಆಗ ನಮ್ಮ ಮನಸ್ಸಿಗೆ ಮುದ ನೀಡುವ, ಒತ್ತಡವನ್ನು ನಿವಾರಿಸುವ ಎಕೈಕ ಔಷಧಿ ಎಂದರೆ ಅದು ಸಂಗೀತ. ಅದೆಷ್ಟೋ ಬಾರಿ ಇನಿದನಿ ನೋಡಬೇಕೆಂದು ಆಗಮಿಸಿದಾಗಲೆಲ್ಲ ಕೂರಲು ಸ್ಥಳಾವಕಾಶವಿಲ್ಲದೆ ನಿಂತುಕೊಂಡು ನೋಡಿ ಸಂತಸಪಟ್ಟವನು ನಾನು ಎಂದರು.
ಸಹನಾ ಗ್ರೂಪ್ ಇದರ ಮುಖ್ಯಸ್ಥ ಸುರೇಂದ್ರ ಶೆಟ್ಟಿ ಮಾತನಾಡಿ ಇನಿದನಿ ಎಂದರೆ ಆರ್ಕೆಸ್ಟ್ರಾ ಅಲ್ಲ ಅದು, ಹಾಡುಗಾರರನ್ನು ಹಿನ್ನೆಲೆ ಸಂಗೀತ ನೀಡಿದ ಕಲಾವಿದರನ್ನು, ಸಾಹಿತ್ಯ ಬರೆದವರನ್ನು ನೆನಪಿಸಿ ಗೌರವಿಸುವ ಉದ್ದೇಶ ಇಟ್ಟುಕೊಂಡು ಅತ್ಯಂತ ಶಿಸ್ತು, ಶ್ರದ್ದೆ, ನಿಷ್ಠೆ ಮತ್ತು ಪ್ರಾಮಾಣಿಕ ಕಾರ್ಯಕ್ರಮದ ಸಂಕೇತವೇ ಇನಿದನಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗೋಪಾಲ ವಿ, ಪ್ರವೀಣ್ ಕುಮಾರ್ ಟಿ, ಸುರೇಶ್ ನಾಯ್ಕ್, ಡಾ. ರಾಜಾರಾಮ್ ಶೆಟ್ಟಿ, ರವಿರಾಜ್ ಶೆಟ್ಟಿ, ಅಶೋಕ್ ಸಾರಂಗ್, ಗಣೇಶ್ ಭಟ್ ಗೋಪಾಡಿ, ಅಶೋಕ್ ತೆಕ್ಕಟ್ಟೆ, ಪಾರ್ವತಿ ಕೊತ್ವಾಲ್, ರಮೇಶ್ ಬಿ, ಜೋಯ್ ಕರ್ವೆಲ್ಲೊ, ಶೇಖರ್ ಕೆ.ಜಿ ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಶ್ ಕಾವೇರಿ ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ್ ಜಿ.ಕೆ ಧನ್ಯವಾದಗೈದರು.