ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಸೇವಾ ಸಂಘ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಗಂಗೊಳ್ಳಿ ಇದರ ವತಿಯಿಂದ ಗಂಗೊಳ್ಳಿಯ ಶ್ರೀ ಶಾರದಾ ಮಂಟಪದಲ್ಲಿ ನಡೆಯುತ್ತಿರುವ ೪೭ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತು.
ಶ್ರೀ ಶಾರದಾ ಮಂಟಪದ ಬಳಿಯಿಂದ ಪ್ರಾರಂಭಗೊಂಡ ಪುರಮೆರವಣಿ ಮೇಲ್‌ಗಂಗೊಳ್ಳಿ ಬಾವಿಕಟ್ಟೆ ತನಕ ಸಾಗಿ ಮುಖ್ಯರಸ್ತೆಯ ಮೂಲಕ ಬಂದರು ಪೋರ್ಟ್ ಆಫೀಸಿನ ಬಳಿ ಕೊನೆಗೊಂಡಿತು. ಬಂದರು ಪೋರ್ಟ್ ಆಫೀಸಿನ ಸಮೀಪ ಪಂಚಗಂಗಾವಳಿ ನದಿಯಲ್ಲಿ ಶ್ರೀ ಶಾರದಾ ಮೂರ್ತಿಯ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಪುರಮೆರವಣಿಗೆಯಲ್ಲಿ ಚಂಡೆ ವಾದನ, ಹುಲಿವೇಷ ಹಾಗೂ ಇನ್ನಿತರ ಕಲಾತಂಡಗಳು ಮೆರಗು ನೀಡಿದ್ದವು.
ಪುರೋಹಿತರಾದ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಮಿತಿಯ ಗೌರವಾಧ್ಯಕ್ಷ ವೇದಮೂರ್ತಿ ಜಿ.ನಾರಾಯಣ ಆಚಾರ್ಯ, ಸಮಿತಿಯ ಅಧ್ಯಕ್ಷ ಸತೀಶ ಜಿ., ಪ್ರಧಾನ ಕಾರ್ಯದರ್ಶಿ ರವೀಂದ್ರ ಪಟೇಲ್, ಕಾರ್ಯದರ್ಶಿ ಗೋಪಾಲ ಖಾರ್ವಿ ದಾವನಮನೆ, ಮಹಿಳಾ ಮಂಡಳಿ ಅಧ್ಯಕ್ಷೆ ಅನಿತಾ ಎನ್.ಶೇಟ್, ಕಾರ್ಯದರ್ಶಿ ಸ್ವಾತಿ ಮಡಿವಾಳ, ಶ್ರೀ ಶಾರದೋತ್ಸವ ಸಮಿತಿ ಮತ್ತು ಮಹಿಳಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯರು, ಭಜಕರು, ಮತ್ತಿತರರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಉಡುಪಿ ಎಡಿಷನಲ್ ಎಸ್ಪಿ ಕುಮಾರ್‌ಚಂದ್ರ ಹಾಗೂ ಡಿವೈಎಸ್‌ಪಿ ಶ್ರೀಕಾಂತ ಮಾರ್ಗದರ್ಶನದಲ್ಲಿ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ಹಾಗೂ ಗಂಗೊಳ್ಳಿ ಪೊಲೀಸ್ ಉಪನಿರೀಕ್ಷಕ ನಂಜಾ ನಾಯ್ಕ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.











