ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಅ.22: ತಾಲೂಕಿನ ಅಂಪಾರು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗರಾಜ (36) ಎಂಬುವವರ ಸಾವಿನ ಪ್ರಕರಣಕ್ಕೆ ತಿರುವು ದೊರಕಿದ್ದು ಪತ್ನಿ, ಸಂಬಂಧಿ ಹಾಗೂ ನೆರಮನೆಯಾತ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಆರೋಪಿಗಳಾದ ಪತ್ನಿ ಮಮತಾ (34), ಆಕೆಯ ಭಾವ ಕುಮಾರ್, ಪಕ್ಕದ ಮನೆಯ ಯುವಕ ದಿನಕರ ಮತ್ತು ಕುಮಾರ್ ಅವರ ಇಬ್ಬರು ಮಕ್ಕಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಬಾಲಕರನ್ನು ರೀಮ್ಯಾಂಡ್ ಹೋಂಗೆ ಕಳುಹಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಒಂದು ವರ್ಷದಿಂದ ಸಂಚು, ಕೊಲೆ ಮಾಡಿ ಸುಳ್ಳು ಪ್ರಕರಣ ದಾಖಲು:
ಸಾಗರ ತಾಲೂಕಿನವರಾದ ನಾಗರಾಜ ಹಾಗೂ ಮಮತಾ ಕಳೆದ ಹತ್ತು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದು ಅವರಿಗೆ ಮೂವರು ಮಕ್ಕಳಿದ್ದಾರೆ. ಅಂಪಾರು ಮೂಡುಬಗೆಯ ವಿವೇಕ ನಗರದಲ್ಲಿ ವಾಸವಾಗಿದ್ದ ನಾಗರಾಜ್ ವಿಪರೀತ ಕುಡಿತದ ಚಟ ಹೊಂದಿದ್ದು ಮನೆಯಲ್ಲಿ ಪ್ರತಿದಿನ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಹೊರಗಿನವರೊಂದಿಗೂ ಜಗಳವಾಡುವುದು, ಖ್ಯಾತೆ ತೆಗೆಯುವುದು ಮಾಡುತ್ತಿದ್ದು, ಪಕ್ಕದ ಮನೆಯ ದಿನಕರ ಎಂಬಾತನೊಂದಿಗೂ ಆಗಾಗ್ಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ.
ಪತಿಯ ಕಿರುಕುಳದಿಂದ ಬೇಸತ್ತಿದ್ದ ಪತ್ನಿ ಮಮತಾ, ಪಕ್ಕದ ಮನೆಯ ಯುವಕ ಹಾಗೂ ತನ್ನ ಭಾವನೊಂದಿಗೆ ಸೇರಿ ಕಳೆದ ಒಂದು ವರ್ಷದಿಂದ ಆತನ ಕೊಲೆಗೆ ಸಂಚು ರೂಪಿಸಿದ್ದಾರೆ. ಅ.18ರ ಸೋಮವಾರ ರಾತ್ರಿ ಎಂದಿನಂತೆ ಕುಡಿದು ಬಂದಿದ್ದ ನಾಗರಾಜ್ ತನ್ನ ಪತ್ನಿಗೆ ಹೊಡೆದು ಮನೆಯಿಂದ ಹೊರಕ್ಕೆ ಕಳುಹಿಸಿ, ಮಲಗಿಕೊಂಡಿದ್ದಾನೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಪತ್ನಿ, ಕುಮಾರ್ ಹಾಗೂ ಆತನ ಇಬ್ಬರು ಮಕ್ಕಳು ಮತ್ತು ದಿನಕರ್ ಎಂಬಾತನ ಜೊತೆ ಸೇರಿಕೊಂಡು ಮಲಗಿದ್ದ ನಾಗರಾಜನ ಕುತ್ತಿಗೆ ನೇಣು ಬಿಗಿದ ಕೊಲೆ ಮಾಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರುದಿನ ಬೆಳಿಗ್ಗೆ ಏನೂ ತಿಳಿಯದವರಂತೆ ನಟಿಸಿದ್ದ ಪತ್ನಿ, ಸ್ಥಳೀಯರು ಹಾಗೂ ಪೊಲೀಸರಿಗೂ ಮೊದಲು ಸುಳ್ಳು ಹೇಳಿದ್ದರು. ನಾಗರಾಜ್ ವಿಪರೀತ ಕುಡಿತದ ಚಟ ಹೊಂದಿದ್ದರಿಂದಲೇ ಜಿಗುಪ್ಸೆಗೊಂಡು ಸಾವನ್ನಪ್ಪಿರುವುದಾಗಿಯೂ ಠಾಣೆಯಲ್ಲಿ ದೂರು ನೀಡಿದ್ದರು.
ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಶಂಕೆ ದೃಢವಾಗಿತ್ತು. ಮರಳಿ ಪೊಲೀಸರು ಮೃತ ನಾಗರಾಜನ ಮನೆಗೆ ಬರುತ್ತಿದ್ದಂತೆ ಪತ್ನಿ ಎಲ್ಲವನ್ನೂ ಬಾಯಿಬಿಟ್ಟಿದ್ದಾಳೆ. ಕೊಲೆಯತ್ನ ನಡೆದಿರುವ ಬಗ್ಗೆ ನಾಗರಾಜನ ಸಹೋದರಿಯೂ ದೂರು ದಾಖಲಿಸಿದ್ದರು. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧನಕ್ಕೊಳಪಡಿಸಿ ಹೆಚ್ಚಿನ ತನಿಕೆ ನಡೆಸಲಾಗಿದೆ/ ಕುಂದಾಪ್ರ ಡಾಟ್ ಕಾಂ ಸುದ್ದಿ/