ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗುತ್ತದೆ. ಮಕ್ಕಳಲ್ಲಿ ಮಾನಸಿಕ, ದೈಹಿಕ, ಆರೋಗ್ಯ ರಕ್ಷಣೆಗೆ ಮತ್ತು ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಅವರಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸುವಲ್ಲಿ ಶಿಬಿರಗಳು ಸಹಕಾರಿಯಾಗಲಿದೆ ಎಂದು ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಮುನಾ ಪೂಜಾರಿ ಹೇಳಿದರು.
ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯತ್ ಗುಜ್ಜಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿ ಇವರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಜಂಟಿ ಆಶ್ರಯದಲ್ಲಿ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಮೂರು ದಿನಗಳ ಮಕ್ಕಳ ಕ್ರಿಯಾತ್ಮಕ ದಸರಾ ಮಜಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಇಂದಿರಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಉಮೇಶ ಮೇಸ್ತ, ಗುಜ್ಜಾಡಿ ಗ್ರಾಪಂ ಸದಸ್ಯ ಹರೀಶ ಮೇಸ್ತ, ಶ್ರೀಧರ ಗುಜ್ಜಾಡಿ, ಪ್ರಕಾಶ ಎಂ.ಪೂಜಾರಿ, ತುಂಗಾ ಪೂಜಾರಿ, ಶಾಲೆಯ ಮುಖ್ಯ ಶಿಕ್ಷಕ ಆನಂದ ಜಿ. ಮತ್ತಿತರರು ಉಪಸ್ಥಿತರಿದ್ದರು.
ಶಿಬಿರದ ನಿರ್ದೇಶಕ ರಮೇಶ ವಕ್ವಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾ ಹರಿಪ್ರಿಯ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮೀ ವಂದಿಸಿದರು. ಶಿಬಿರದಲ್ಲಿ ವಿವಿಧ ಕಲಾಕೃತಿ, ಸ್ಪಂಜಿನಿಂದ ಗೊಂಬೆ ತಯಾರಿ, ಕಾಗದದಿಂದ ಚೀಲ ಮತ್ತು ವಿವಿಧ ಮುಖವಾಡ, ಟೋಪಿ, ಕಿರೀಟ, ಹೆಲ್ಮೆಟ್ ರಚನೆ, ವಿಭಿನ್ನ ರೀತಿಯ ಅಭಿನಯ ಗೀತೆ, ಕನ್ನಡ ಚುಟುಕು ಕವನ ಮೊದಲಾದ ಚಟುವಟಿಕೆಗಳನ್ನು ಕಲಿಸಲಾಯಿತು. ಸುಮಾರು ೫೮ ಮಂದಿ ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಂಡರು.