ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗುತ್ತಿಗೆದಾರ ಯು.ಬಿ. ಶೆಟ್ಟಿ ಅವರ ಧಾರವಾಡ ಹಾಗೂ ಉಪ್ಪುಂದದ ನಿವಾಸದ ಮೇಲೆ ಗುರುವಾರ ಐಟಿ ದಾಳಿ ನಡೆದಿದ್ದು, ಅಧಿಕಾರಿಗಳು ಸಂಜೆಯ ತನಕ ದಾಖಲೆಗಳ ಪರಿಶೀಲಿಸಿರುವ ಬಗ್ಗೆ ತಿಳಿದುಬಂದಿದೆ.
ಮಂಗಳೂರಿನಿಂದ ಕಾರಿನಲ್ಲಿ ಬಂದ 9 ಮಂದಿ ಅಧಿಕಾರಿಗಳ ತಂಡ, ಯು.ಬಿ. ಶೆಟ್ಟಿ ಅವರ ಉಪ್ಪುಂದದ ನಿವಾಸಕ್ಕೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದೆ. ಯು.ಬಿ. ಶೆಟ್ಟಿ ಅವರು ಸದ್ಯ ಧಾರವಾಡದಲ್ಲಿದ್ದು ಅಲ್ಲಿ ಅವರ ನಿವಾಸ ಹಾಗೂ ಅವರ ಸಹೋದರ, ಉದ್ಯಮಿ ಸೀತಾರಾಮ ಶೆಟ್ಟಿ ಅವರ ನಿವಾಸದಲ್ಲಿ ಸಂಜೆಯತನಕ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ.
ಉಪ್ಪುಂದ ಮೂಲದವರಾದ ಯು.ಬಿ ಶೆಟ್ಟಿ ಅವರ ಧಾರವಾಡದಲ್ಲಿ ಉದ್ಯಮಿಯಾಗಿದ್ದು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಆಪ್ತರ ಮೇಲೆ ನಡೆಯುತ್ತಿರುವ ದಾಳಿಯ ಮುಂದುವರಿದ ಭಾಗ, ರಾಜಕೀಯ ಪ್ರೇರಿತ ದಾಳಿ ಎನ್ನಲಾಗುತ್ತಿದೆ. ಯು.ಬಿ ಶೆಟ್ಟಿ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಎಂ.ಎಲ್.ಸಿ ಸೀಟಿಗಾಗಿ ಉಮೇದುವಾರಿಕೆ ಸಲ್ಲಿಸಿದ್ದರು.
ಯುಬಿ ಶೆಟ್ಟಿ ಅವರು ಬೈಂದೂರಿನಲ್ಲಿ ಸಾಕಷ್ಟು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಕಳೆದ ವರ್ಷ ಎರಡು ಖಾಸಗಿ ಶಾಲೆಗಳನ್ನು ಖರೀದಿಸಿ, ನಡೆಸುತ್ತಿದ್ದಾರೆ. ಉಪ್ಪುಂದದ ಅವರ ಮೂಲ ಮನೆಯಲ್ಲಿ ಇನ್ನೋರ್ವ ಸಹೋದರ ವಾಸವಾಗಿದ್ದು, ಯಾವುದೇ ದಾಖಲೆಗಳು ಪತ್ತೆಯಾಗಿರುವ ಬಗ್ಗೆ ಹಾಗೂ ದಾಳಿಯ ನಿಖರ ಕಾರಣ ಈವರೆಗೆ ತಿಳಿದುಬಂದಿಲ್ಲ.