ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರತಿಯೊಂದು ಭಾಷೆಗೆ ಅದರದ್ದೆ ಆದ ಅಸ್ತಿತ್ವ ಹಾಗೂ ಐತಿಹಾಸಿಕ ಹಿನ್ನೆಲೆ ಇರುತ್ತದೆ. ಆ ನೆಲೆಯಲ್ಲಿ ಕನ್ನಡ ಭಾಷಿಕರಾದ ನಾವು ಪುಣ್ಯವಂತರು. ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ನಾವು ಉಳಿಸಿ ಬೆಳೆಸಬೇಕು. ಜೊತೆಗೆ ದೇಶಾಭಿಮಾನ, ದೇಶ ಭಕ್ತಿ, ಸೈನ್ಯದ ಕುರಿತಾದ ಅಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಯೋಧ ಹಾಗೂ ಸಾಹಿತಿಗಳಾದ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.
ಅವರು ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ 66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ‘ಕನ್ನಡಕ್ಕಾಗಿ ನಾವು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ ಉಮೇಶ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಸುಕುಮಾರ ಶೆಟ್ಟಿ ಕಮಲಶಿಲೆ ಸ್ವಾಗತಿಸಿದರು, ಉಪನ್ಯಾಸಕರಾದ ಅಮೃತಾ ಅತಿಥಿಗಳನ್ನು ಪರಿಚಯಿಸಿ, ಪ್ರವೀಣಾ ಮಹಾಬಲ ಪೂಜಾರಿ ವಂದಿಸಿ, ರೇಷ್ಮಾ ಶೆಟ್ಟಿ ನಿರೂಪಿಸಿದರು. ನಾಡು ನುಡಿಯ ಸೇವೆಗಾಗಿ ಚಂದ್ರಶೇಖರ ನಾವಡರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿಯ ಮಹತ್ವ ಸಾರುವ ಸಮೂಹ ಗೀತಗಾಯನ ಹಾಗೂ ನೃತ್ಯ ಪ್ರದರ್ಶನ ನಡೆಯಿತು. ಉಪನ್ಯಾಸಕಿ ದೀಪಿಕಾ ರಾಘವೇಂದ್ರ ಕಾರ್ಯಕ್ರಮದಲ್ಲಿ ಹಾಡು ಮತ್ತು ನೃತ್ಯವನ್ನು ಸಂಯೋಜಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರರು ಉಪಸ್ಥಿತರಿದ್ದರು.