ಉಡುಪಿ: ರಸ್ತೆ ಅಪಘಾತ ನಡೆದಾಗ ಅಲ್ಲಿ ಬಿದ್ದವರ ಪೊಟೋ ಕ್ಲಿಕ್ಕಿಸಿ ಅದನ್ನು ಫೇಸ್‌ಬುಕ್, ವಾಟ್ಸ್‌ಪ್‌ಗೆ ಅಪ್‌ಲೋಡ್ ಮಾಡಿ ಅನಾಗರೀಕತೆ ತೋರ್ಪಡಿಸುವ ಬದಲಿಗೆ ಆ ಸಮಯದಲ್ಲಿ ವ್ಯಕ್ತಿಯ ಜೀವ ಉಳಿಸಿ ಮಾನವೀಯತೆ ಮೆರೆಯಬೇಕು ಎಂದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಕರೆ ನೀಡಿದರು.
ಅಪಘಾತ ನಡೆದ ಕೂಡಲೇ ಸಹಾಯ ಮಾಡಬೇಕೆಂಬ ಮನಸ್ಸಿದ್ದರೂ ಕೆಲವರು ಪೊಲೀಸ್, ಕೋರ್ಟ್ ಭಯದಿಂದ ಹಿಂಜರಿಯುತ್ತಾರೆ. ಹೀಗೆ ಭಯಪಡಬೇಕಾಗಿಲ್ಲ. ಅಪಘಾತವನ್ನು ಮೊದಲು ನೋಡಿದವನನ್ನಾಗಲಿ, ಆಸ್ಪತ್ರೆಗೆ ದಾಖಲಿಸಿದವನನ್ನಾಗಲಿ ಪೊಲೀಸರು ಒತ್ತಾಯಪಡಿಸಿ ಸಾಕ್ಷಿದಾರನನ್ನಾಗಿ ಮಾಡುವಂತಿಲ್ಲ. ನ್ಯಾಯಾಲಯ ಕೂಡ ಪ್ರಶ್ನಿಸುವುದಿಲ್ಲ. ಹಾಗಾಗಿ ಯಾವುದೇ ಅಂಜಿಕೆಯಿಲ್ಲದೆ ಸಹಾಯ ಮಾಡಬಹುದು. ಒಂದು ವೇಳೆ ಅಗತ್ಯ ಬಿದ್ದಾಗ ಸಾಕ್ಷಿ ಹೇಳಿದರೆ ಅಪಘಾತದಿಂದ ನಿಜವಾಗಿ ಅನ್ಯಾಯಕ್ಕೊಳಗಾದವನಿಗೆ ವಿಮಾ ಪರಿಹಾರ ಮತ್ತಿತರ ಪರಿಹಾರ ಧನ ದೊರೆಯಲು ಸಹಾಯವಾಗುತ್ತದೆ. ಸಹಾಯ ಮಾಡಿದವರು ಬಯಸಿದರೆ ಮಾತ್ರ ಸಾಕ್ಷಿಯಾಗುತ್ತಾರೆ ಎಂದು ಅವರು ರಸ್ತೆ ಅಪಘಾತ ದೇಶದ ದೊಡ್ಡ ರೋಗದಂತಾಗಿದೆ. ನಾಲ್ಕು ನಿಮಿಷ ಕ್ಕೋರ್ವರು ರಸ್ತೆ ಅಪಘಾತದಿಂದ ಮೃತಪಡುತ್ತಿದ್ದಾರೆ. ಇಂತಹ ಅಪಘಾತಗಳಾದಾಗ ಸಾರ್ವಜನಿಕರ ತುರ್ತು ಸ್ಪಂದನದಿಂದ ಕೆಲವು ಜೀವಗಳನ್ನು ಉಳಿಸಲು ಸಾಧ್ಯವಿದೆ ಎಂದರು.
ಉಡುಪಿ ಪರಿಸರದ ಯುವಕರ ತಂಡವೊಂದು ಅಪಘಾತ-ಸಾರ್ವಜನಿಕರ ಹೊಣೆಗಾರಿಕೆ ಕುರಿತಾಗಿ ಸಿದ್ಧಪಡಿಸಿದ ‘ಮಾನವೀಯತೆ’ ಶೀರ್ಷಿಕೆಯ ಕಿರುಚಿತ್ರವನ್ನು ಸೆ.18ರಂದು ಪ್ರಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾನವೀಯತೆ ಕಿರುಚಿತ್ರವನ್ನು ಸುರೇಂದ್ರ ಮಾರ್ಪಳ್ಳಿ ನಿರ್ದೇಶಿಸಿದ್ದಾರೆ. ಸುರೇಂದ್ರ ಪಣಿಯೂರು ಅವರು ಛಾಯಾಗ್ರಹಣ ಮಾಡಿದ್ದಾರೆ. ಪ್ರದೀಪ್ ಶೆಟ್ಟಿ ಕುಕ್ಕಿಕಟ್ಟೆ, ಬ್ರಿಜೇಶ್, ಸುಜಿತ್, ಉದಯ ಕುಲಾಲ್, ಹಿತೇಶ್ ಬನ್ನಂಜೆ, ಸಂದೀಪ್ ಕುಂದರ್, ಸುಧೀರ್ ಶೇಟ್ ಈ ಚಿತ್ರತಂಡದಲ್ಲಿದ್ದಾರೆ. ಎಸ್‌ಪಿ ಅಣ್ಣಾಮಲೈ, ಶೀರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು, ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿ ಅವರ ಸಂದೇಶವೂ ಕಿರುಚಿತ್ರದಲ್ಲಿದೆ. ಸಮಾರಂಭದಲ್ಲಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ನ್ಯಾಯವಾದಿ ಸುನಿಲ್ ಮೂಲ್ಯ, ಸೂರಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.