ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸರೋಜಿನಿ ಮಹಿಷಿ ವರದಿಯಂತೆ ರಾಜ್ಯದಲ್ಲಿನ ಐಟಿ ಬಿಟಿ ಸೇರಿದಂತೆ ಎಲ್ಲಾ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವ ಕುರಿತಂತೆ, ಕಾನೂನು ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಅವರು ಇಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಿರುದ್ಯೋಗ ನಿವಾರಣೆ ಮತ್ತು ಕನ್ನಡ ಭಾಷಾಭಿಮಾನ ಹೆಚ್ಚಿಸಲು , ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವ ನಿಟ್ಟಿನಲ್ಲಿ, ಸರೋಜಿನಿ ಮಹಿಷಿ ವರದಿಯಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.
ಯುವ ಜನತೆ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುವುದರೊಂದಿಗೆ, ನವ ಸಾಹಿತಿಗಳ ಸಂಖ್ಯೆ ಹೆಚ್ಚಿಸಲು ಬೇಕಾದ ಸೌಲಭ್ಯಗಳನ್ನು ಸರಕಾರದಿಂದ ನೀಡಲು ಸೂಕ್ತ ಯೋಜನೆಗಳನ್ನು ರೂಪಿಸಲಾಗುವುದು ಎಂದ ಅವರು, ಕನ್ನಡ ಪುಸ್ತಕಗಳನ್ನು ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರೊಂದಿಗೆ ಇತರರಿಗೂ ಕನ್ನಡ ಓದುವ ಮತ್ತು ಭಾ಼ಷಾಭಿಮಾನದ ಗೀಳು ಮೂಡಿಸಬೇಕು ಎಂದರು.
ರಾಜ್ಯದ ಮನೆ ಮನೆಗಳಲ್ಲಿ ಕನ್ನಡದ ಬಳಕೆ ಆಗಬೇಕು, ಮಕ್ಕಳಿಗೆ ಕನ್ನಡ ಭಾವಗೀತೆಗಳನ್ನು ಕೇಳಿಸಬೇಕು ,ಕುಟುಂಬ ಸದಸ್ಯರೊಂದಿಗೆ ಕನ್ನಡದಲ್ಲಿ ಮಾತನಾಡಬೇಕು, ಕನ್ನಡ ಬಳಕೆಯ ಮಧ್ಯದಲ್ಲಿ ಅನ್ಯ ಭಾಷೆಯ ಪ್ರಯೋಗ ಸಲ್ಲದು ಎಂದು ಸಚಿವರು ಹೇಳಿದರು.
ಜಿಲ್ಲೆಗಳಲ್ಲಿ ನೀಡುವ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಯಾವುದೇ ನಿರ್ದಿಷ್ಠ ಮಾನದಂಡಗಳು ಇಲ್ಲವಾಗಿದ್ದು, ಇದರಿಂದ ಗೊಂದಲಗಳಾಗುತ್ತಿದ್ದು, ಈ ಬಗ್ಗೆ ಸೂಕ್ತ ಏಕರೂಪದ ನಿಯಮಾವಳಿಗಳನ್ನು ಹೊರಡಿಸಿ, ಅದರ ಆಧಾರದಲ್ಲಿ ಮುಂದಿನ ವರ್ಷದಿಂದ ಜಿಲ್ಲೆಗಳಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದರು.
ಕನ್ನಡ ಮತ್ತು ಕರುನಾಡಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಕರುನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ದೇಶ-ವಿದೇಶಗಳಲ್ಲಿಯೂ ಕನ್ನಡದ ಕಂಪು ಮೂಡಿಸುವಂತಾಗಬೇಕು. ಆ ನಿಟ್ಟಿನಲ್ಲ ನಾವು ದೇಶಭಿಮಾನ ಮತ್ತು ಬಾ಼ಷೆಯ ಸ್ವಾಭಿಮಾನಿಗಳಾಗುವುದು ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ 30 ಸಾಧಕರಿಗೆ ಹಾಗೂ 3 ಸಂಸ್ಥೆಗಳಿಗೆ ಜಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಇತರರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.