ಕುದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿರುವುದರಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ. ಶಿಕ್ಷಣ ಇಂದಿನ ವ್ಯವಸ್ಥೆಗೆ ಪ್ರಸ್ತುತವಾಗಬೇಕು ಮತ್ತು ವ್ಯವಸ್ಥೆಗೆ ಹೊಂದಾಣಿಕೆಯಾಗಬೇಕೆಂಬ ದೃಷ್ಟಿಯಿಂದ ಶಿಕ್ಷಣ ಇಲಾಖೆ ಅನೇಕ ಹೊಸ ವಿಧಾನಗಳ ಮತ್ತು ತಂತ್ರಜ್ಞಾನಗಳ ಮೂಲಕ ಮುನ್ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ವಲಯ ಕ್ಷೇತ್ರ ಸಮನ್ವಯಾಧಿಕಾರಿ ಸದಾನಂದ ಬೈಂದೂರು ಹೇಳಿದರು.
ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಟಲ್ ಟಿಂಕರಿಂಗ್ ಲ್ಯಾಬ್‌ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿರುವ ಕೌಶಲ್ಯ ಅಭಿವೃದ್ಧಿಗೆ, ಹೊಸ ಆವಿಷ್ಕಾರ ಮತ್ತು ಪ್ರಯೋಗಗಳನ್ನು ಸ್ವಕಲಿಕೆ ಮೂಲಕ ತಿಳಿದುಕೊಳ್ಳಲು ಅಟಲ್ ಟಿಂಕರಿಂಗ್ ಲ್ಯಾಬ್ ಸಹಕರಿಯಾಗಲಿದ್ದು, ಶಿಕ್ಷಕರು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ದೊರೆಯುವಂತೆ ಮಾಡಬೇಕಿದೆ. ಸರಕಾರದ ಈ ಯೋಜನೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ಹೊಸ ಕ್ರಾಂತಿಗೆ ಮುನ್ನುಡಿ ಬರೆಯಬೇಕು ಎಂದು ಅವರು ಹೇಳಿದರು.
ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ.ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ವಠಾರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಯು.ಪಾಂಡುರಂಗ ಪೈ ಸ್ಮಾರಕ ಸಂಕೀರ್ಣವನ್ನು ಸುಮನಾ ಕಾಮತ್, ಕರ್ಣಾಟಕ ಬ್ಯಾಂಕ್ ತರಗತಿ ಕೊಠಡಿಯನ್ನು ಕರ್ಣಾಟಕ ಬ್ಯಾಂಕಿನ ಸಿಬಿಒ ಗೋಕುಲ್‌ದಾಸ್ ಪೈ ಹಾಗೂ ನಾರಾಯಣ ಮಡಿವಾಳ ಸ್ಮಾರಕ ತರಗತಿ ಕೊಠಡಿಯನ್ನು ಸೀತಾರಾಮ ಮಡಿವಾಳ ಉದ್ಘಾಟಿಸಿದರು. ಶಾಲೆಯ ಮಧ್ಯಾಹ್ನದೂಟ ದಾನಿಗಳ ನಾಮಫಲಕ ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ ಪುತ್ರನ್ ಅನಾವರಣಗೊಳಿಸಿದರು. ಇದೇ ಸಂದರ್ಭ ಸರಸ್ವತಿ ವಿದ್ಯಾಲಯ ಸಚಿತ್ರ ಇತಿಹಾಸ ಕೈಪಿಡಿ ಅನಾವರಣಗೊಳಿಸಲಾಯಿತು. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ದಾನಿ ಯು.ನಾರಾಯಣ ಪೈ, ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಅಟಲ್ ಟಿಂಕರಿಂಗ್ ಲ್ಯಾಬ್‌ನ ಉಡುಪಿ ಜಿಲ್ಲೆ ನೋಡೆಲ್ ಆಫೀಸರ್ ಸುಬ್ರಹ್ಮಣ್ಯ ಭಟ್, ಸೌರಭ್ ಶೆಟ್ಟಿ, ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸ.ವಿ.ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉಮೇಶ ಕರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಶಾಲೆಯ ಆಡಳಿತ ಮಂಡಳಿ ಸದಸ್ಯ ಕೆ.ರಾಮನಾಥ ನಾಯಕ್ ಸ್ವಾಗತಿಸಿದರು. ಸಂಚಾಲಕ ಎನ್.ಸದಾಶಿವ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿ ರೇಷ್ಮಾ ನಾಯಕ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ದೀಕ್ಷಿತ್ ಮೇಸ್ತ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕಿ ಸುಜಾತಾ ಕಾರ್ಯಕ್ರಮ ನಿರ್ವಹಿಸಿದರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ವಂದಿಸಿದರು.
















