ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಪ್ಪಿನಕುದ್ರು ಕಾಮತ್ ಕುಟುಂಬ ವಿಶಿಷ್ಟವಾದ ಯಕ್ಷಗಾನ ಗೊಂಬೆಯಾಟ ಪರಂಪರೆಯನ್ನು 350 ವರ್ಷಗಳಿಂದ ಸಂರಕ್ಷಿಸಿಕೊಂಡು ಬಂದಿದೆ ಎನ್ನುವುದು ಈ ಅಪೂರ್ವದ ಕಲೆಯ ಬಗೆಗೆ ಇದ್ದ ಅವರ ಪ್ರೀತಿ, ಬದ್ಧತೆಯನ್ನು ತೋರಿಸುತ್ತದೆ. ಈಗ ಹಮ್ಮಿಕೊಂಡಿರುವ ’ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಅಭಿಯಾನ ಈ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನ ಇನ್ನೊಂದು ಪರಿಣಾಮಕಾರಿ ಹೆಜ್ಜೆ ಎನಿಸಲಿದೆ ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.
ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಜನ್ಮ ಶತಮಾನೋತ್ಸವದ ನಿಮಿತ್ತ ಉಪ್ಪಿನಕುದ್ರು ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಆಯೋಜಿಸಿರುವ ’ಹಳ್ಳಿಯೆಡೆಗೆ ಗೊಂಬೆ ನಡಿಗೆ’ ಅಭಿಯಾನವನ್ನು ಬಡಾಕೆರೆ ಲಕ್ಷ್ಮೀಜನಾರ್ದನ ಸಭಾಭವನದಲ್ಲಿ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಗೊಂಬೆಯಾಟವನ್ನು ವಿದೇಶಗಳಲ್ಲೂ ಪರಿಚಯಿಸಿದ ಕೀರ್ತಿ ಇಂದು ಆರನೆಯ ತಲೆಮಾರಿನ ಪ್ರಾಯೋಜಕರಾಗಿ ಮುನ್ನಡೆಸುತ್ತಿರುವ ಭಾಸ್ಕರ ಕೊಗ್ಗ ಕಾಮತರಿಗೆ ಸೇರುತ್ತದೆ. ಕರಾವಳಿಯ ಈ ಅಪೂರ್ವ ಕಲೆಗೆ ಇಲ್ಲಿನ ಜನರು ಪ್ರೋತ್ಸಾಹ ನೀಡುವ ಮೂಲಕ ಅದು ನಶಿಸದೆ ಬೆಳೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಸ್ವಾಗತಿಸಿದ ಭಾಸ್ಕರ ಕೊಗ್ಗ ಕಾಮತ್ ಸವಾಲುಗಳ ನಡುವೆ ಗೊಂಬೆಯಾಟ ಉಳಿದುಬಂದ ಬಗೆಯನ್ನು ವಿವರಿಸಿದರು. ನಾಡಿನ ಸಹೃದಯಿಗಳ ಜತೆಗೆ ಸುಧಾ ಮೂರ್ತಿ ಮತ್ತು ದಯಾನಂದ ಪೈ ಅವರ ಅಮೂಲ್ಯ ಮತ್ತು ಸಕಾಲಿಕ ಬೆಂಬಲವನ್ನ ಸ್ಮರಿಸಿಕೊಂಡರು. ಬಡಾಕೆರೆಯಲ್ಲಿ ಕಾರ್ಯಕ್ರಮ ಆಯೋಜಿಸಲು ಕಾರಣರಾದ ಸತೀಶ ಶೇಟ್, ಮಾಧವ ಅಡಿಗ, ಸತೀಶ ನಾಯಕ್ ಶುಭ ಹಾರೈಸಿದರು.
ಶಿಕ್ಷಕ ನಾಗೇಶ ಶ್ಯಾನುಭಾಗ್ ನಿರೂಪಿಸಿದರು. ಉದ್ಘಾಟನೆಯ ಬಳಿಕ ’ಚೂಡಾಮಣಿ, ಲಂಕಾದಹನ’ ಪ್ರಸಂಗದ ಗೊಂಬೆಯಾಟ ಮತ್ತು ಅದರ ಪ್ರಾತ್ಯಕ್ಷಿಕೆ ನಡೆಯಿತು.
ಇದನ್ನೂ ಓದಿ:
► ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ಟ್ರಸ್ಟ್‌ನ ಬೆಳ್ಳಿಹಬ್ಬ ಸಂಭ್ರಮ, ಹಳ್ಳಿಯೆಡೆಗೆ ಗೊಂಬೆ ನಡಿಗೆ ಕಾರ್ಯಕ್ರಮ – https://kundapraa.com/?p=54575 .