ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾಹಿತಿ ಹಕ್ಕು ಕಾಯಿದೆಯನ್ನು ದುರುಪಯೋಗಪಡಿಸಿಕೊಂಡು ತಾಲೂಕಿನ ಕೆ. ವೆಂಕಟೇಶ ಕಾರಂತ ಎನ್ನುವ ವ್ಯಕ್ತಿಯು ಬೈಂದೂರು ಭಾಗದ ಉದ್ಯಮಿಗಳು, ಅಧಿಕಾರಿಗಳು, ನೌಕರರುಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಹಾಗೂ ಬೈಂದೂರು ಕ್ಷೇತ್ರ ಅಭಿವೃದ್ಧಿ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಅಡ್ಯಂತಾಯ ಅವರು ರಾಜ್ಯಪಾಲರು, ಮುಖ್ಯಮಂತ್ರಿಗಳಿಂದ ಹಿಡಿದು ಗೃಹ ಇಲಾಖೆ, ಜನಪ್ರತಿನಿಧಿಗಳಿಗೆ ದೂರು ಸಲ್ಲಿಸಿದ್ದಾರೆ.
ದೂರಿನ ವಿವರ:
ಯಡ್ತರೆ ಗ್ರಾಮದ ಕೆರೆಕಟ್ಟೆ ಸಮೀಪದ ನಿವಾಸಿಯಾದ ವೆಂಕಟೇಶ ಕಾರಂತ ಎನ್ನುವ ವ್ಯಕ್ತಿ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿ. ನಿವೃತ್ತಿಯ ನಂತರ ತನ್ನ ಉಪಕಸುಬಾಗಿ ಮಾಹಿತಿ ಹಕ್ಕು ಕಾಯಿದೆಯನ್ನು ದುರುಪಯೋಗಪಡಿಸಿಕೊಂಡು ಬೈಂದೂರು ತಾಲೂಕಿನಾದ್ಯಂತ ಉದ್ಯಮಿಗಳಿಗೆ, ಅಧಿಕಾರಿ, ನೌಕರರುಗಳಿಗೆ ಸಾಮಾಜಿಕ ಕಾರ್ಯಕರ್ತನ ಹೆಸರಿನಲ್ಲಿ ಕಿರುಕುಳ ನೀಡಿ, ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದು, ಅನಗತ್ಯ ಕಿರಿ ಕಿರಿಯಿಂದ ವ್ಯವಹಾರ ಮಾಡಲು ಹಿಂದೇಟು ಹಾಕುತಿದ್ದಾರೆ. ಇದು ಬೈಂದೂರಿನ ಬೆಳವಣಿಗೆಗೆ ಮಾರಕವಾಗಿದೆ ಎಂದು ಆರೋಪಿಸಿದ್ದಾರೆ.
ಕೆರೆಕಟ್ಟೆ ಪ್ರಸನ್ನ ಚಾರಿಟೇಬಲ್ ಟ್ರಸ್ಟ್ (ರಿ) ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಆ ಸಂಸ್ಥೆಯ ಮುಖಾಂತರ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳಿಂದ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಹಣ ವಸೂಲಿ ಮಾಡಿ ಭ್ರಷ್ಟಾಚಾರ ಮಾಡುತ್ತಿದ್ದಾನೆ. ಕೆರೆಕಟ್ಟೆ ಪ್ರಸನ್ನ ಚಾರಿಟೇಬಲ್ ಟ್ರಸ್ಟ್ ಯಾವುದೇ ಸಮಾಜ ಸೇವೆ ಮಾಡುವ ಸೇವಾ ಮನೋಭಾವ ಹೊಂದಿರದೆ ಕೇವಲ ಭ್ರಷ್ಟಾಚಾರದ ಹಣವನ್ನು ಸ್ವೀಕರಿಸುವ ಟ್ರಸ್ಟ್ ಆಗಿರುತ್ತದೆ. ಸದರಿ ಟ್ರಸ್ಟ್ ಪ್ರಾರಂಭವಾದಂದಿನಿಂದ ಇಲ್ಲಿಯವರೆಗೂ ಯಾವುದೇ ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದಿಲ್ಲ. ಆದ್ದರಿಂದ ಟ್ರಸ್ಟಿನ ಲೆಕ್ಕಪತ್ರಗಳನ್ನು ತನಿಖೆ ಮಾಡಬೇಕು ಹಾಗೂ ಟ್ರಸ್ಟಿಗೆ ಬಂದಿರುವ ಮೂಲವನ್ನು ತನಿಖೆ ಮಾಡುವಂತೆ ಅವರು ದೂರಿನಲ್ಲಿ ಕೋರಿದ್ದಾರೆ.
ಕೆ. ವೆಂಕಟೇಶ ಕಾರಂತ ಮಾಹಿತಿ ಹಕ್ಕು ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಬೈಂದೂರು ಪಟ್ಟಣದ ಪೇಟೆಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕದಲ್ಲಿ ನಿರ್ಮಿಸುತ್ತಿರುವ ಕಟ್ಟಡದ ಮಾಲಿಕರಿಂದ ಹಣ ವಸೂಲಿ ಮಾಡಲು ಸದರಿ ಕಟ್ಟಡಗಳ ಪರವಾನಗೆ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದು ನಂತರ ಕಟ್ಟಡದ ಮಾಲಿಕರುಗಳಿಗೆ ತಮ್ಮ ಕಟ್ಟಡ ನಿಯಮಾನುಸಾರ ರಚನೆಯಾಗಿಲ್ಲ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡುತ್ತೇನೆ. ನಿಮ್ಮ ಕಟ್ಟಡವನ್ನು ತೆರವುಗೊಳಿಸಲು ಕ್ರಮ ಜರುಗುವಂತೆ ಮಾಡುತ್ತೇನೆ ಎಂದು ಕಟ್ಟಡ ಮಾಲಿಕರುಗಳಿಗೆ ಹೆದರಿಸಿ ಅವರಿಂದ ಲಂಚದ ಹಣವನ್ನು ಪಡೆದಿರುವುದು ಸಾರ್ವಜನಿಕ ಸತ್ಯವಾಗಿದೆ ಹಾಗೂ ಎಲ್ಲ ಕಟ್ಟಡ ಮಾಲಿಕರು ಹೆದರಿಕೊಂಡು ಇವನಿಗೆ ಲಕ್ಷಾಂತರ ಹಣ ನೀಡಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸತ್ಯಾಸತ್ಯತೆ ಹೊರಬರಬೇಕಾದರೆ ಬೈಂದೂರು ಪೇಟೆ ಹಾಗೂ ರಾ.ಹೆ. ಇಕ್ಕೆಲಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಕುರಿತು ತನಿಖೆ ನಡೆದು ಕಾನೂನು ಪ್ರಕಾರ ಇದೆ ಎನ್ನುವುದು ಸ್ಪಷ್ಟಪಡಿಸಬೇಕಿದೆ. ಇಲ್ಲವಾದಲ್ಲಿ ವೆಂಕಟೇಶ ಕಾರಂತ ಪಡೆದು ತಟಸ್ಥವಾಗಿರುವುದು ಖಾತ್ರಿಯಾಗುತ್ತದೆ.
ಈ ಹಿಂದೆ ಬೈಂದೂರಿನ ಸಿಟಿ ಪಾಯಿಂಟ್ ಮಾಲಕರಿಂದ ಮೂರು ಲಕ್ಷ ರೂಪಾಯಿಗಳನ್ನು ಬೈಂದೂರು ಸಂತೆ ಮಾರ್ಕೆಟ್ ಬಳಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ ಉದ್ಯಮಿಯಿಂದ ಒಂದು ಲಕ್ಷ ರೂಪಾಯಿಗಳನ್ನು, ಯಡ್ತರೆ ಬಸ್ಸು ನಿಲ್ದಾಣ ಗುತ್ತಿಗೆದಾರರಿಂದ 10 ಲಕ್ಷ ರೂಪಾಯಿಗಳನ್ನು ಪಡೆದಿರುತ್ತಾನೆ. ಇದರ ಜೊತೆಗೆ ಬೈಂದೂರು ಪಟ್ಟಣ ಪಂಚಾಯತ್’ನಲ್ಲಿ ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಪಡೆದು ದೂರು ನೀಡಿ ಅವರಿಂದ ಹಣ ದೊರೆತ ಬಳಿಕ ಪ.ಪಂಚಾಯತ್’ಗೆ ನೀಡಿದ ದೂರನ್ನು ವಿವಿದ ಕಾರಣ ನೀಡಿ ವಾಪಾಸ್ಸು ಪಡೆಯುತ್ತಾನೆ. ಈ ಬಗ್ಗೆ ಪಟ್ಟಣ ಪಂಚಾಯತ್ ನಲ್ಲಿ ವಿವರವಾದ ದಾಖಲೆಗಳಿವೆ. ಕಟ್ಟಡ ಮಾಲಿಕರಿಂದ ಹಣ ಪಡೆದ ನಂತರ ಯಾವುದೆ ತನಿಖೆಯನ್ನು ಮುಂದುವರಿಸುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಹಿಂದೆ 2019 ನೇ ಇಸ್ವಿಯಲ್ಲಿ ದಲಿತ ಯುವಕನಿಗೆ ಕೆಲಸ ಕೊಡಿಸುತ್ತೇನೆ ಎಂದು ಹಣ ವಸೂಲಿ ಮಾಡಿ ನಂತರ ಕೆಲಸ ಕೊಡದಿದ್ದಾಗ ಅವರನ್ನು ಪ್ರಶ್ನಿಸಿದಾಗ ಅವನ ಮೇಲೆ ಹಲ್ಲೆ ಮಾಡಿರುತ್ತಾನೆ. ಈ ಬಗ್ಗೆ ವೆಂಕಟೇಶ ಕಾರಂತ ಮೇಲೆ ಕ್ರಿಮಿನಲ್ ಪ್ರಕರಣ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಇವರ ಕುಟುಂಬಸ್ಥರಲ್ಲಿ ಅಂಗವಿಕಲ ಸಹೋದರರಿಗೆ ಆಸ್ತಿಯಲ್ಲಿ ಅನ್ಯಾಯ ಮಾಡಿರುತ್ತಾನೆ. ಇವರಿಂದ ಹಲವಾರು ಅಧಿಕಾರಿ ನೌಕರರು, ಉದ್ಯಮಿಗಳು, ಸಾರ್ವಜನಿಕರು ರೋಸಿ ಹೋಗಿದ್ದು ದೂರು ನೀಡದೆ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕ ಮಾಹಿತಿ ಹಕ್ಕು ಕಾಯ್ದೆಯನ್ನು ಹಣ ಮಾಡುವ ಅಸ್ತ್ರವಾಗಿ ದುರುಪಯೋಗಪಡಿಸಿಕೊಂಡು ವಂಚನೆ ಮಾಡುತ್ತಿರುವ ವೆಂಕಟೇಶ ಕಾರಂತನನ್ನು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಮಾಹಿತಿ ಪಡೆಯದಂತೆ ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಬೇಕು ಮತ್ತು ಇವನು ಸ್ಥಾಪಿಸಿರುವ ನಕಲಿ ಚಾರಿಟೇಬಲ್ ಟ್ರಸ್ಟ್ ಸಂಪೂರ್ಣ ತನಿಖೆಗೊಳಿಸಿ ರದ್ದು ಪಡಿಸಬೇಕು ಮತ್ತು ಇವನ ವಿರುದ್ದ ಸ್ವಯಂ ಪ್ರೇರಿತವಾಗಿ ರಾಜ್ಯ ಸರಕಾರ, ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಬೈಂದೂರು ತಾಲೂಕಿನ ಸಾರ್ವಜನಿಕರು ಉದ್ಯಮಿಗಳು ಸರಕಾರಿ ನೌಕರರುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ದೂರಿನಲ್ಲಿ ಕೋರಲಾಗಿದೆ.
ಇದರ ಜೊತೆಗೆ ಬೈಂದೂರಿನ ಜನಪರ ಕಾಳಜಿಯ ಸಾರ್ವಜನಿಕರು ಇಂತಹ ವ್ಯಕ್ತಿಗಳ ತೆರೆಮರೆಯ ಕುತಂತ್ರದ ಬಗ್ಗೆ ಜಾಗ್ರತಗೊಳ್ಳಬೇಕಿದೆ. ಬೈಂದೂರಿನ ಅಭಿವೃದ್ಧಿ ದೃಷ್ಟಿಯಿಂದ ಸರಕಾರ, ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಸಮಿತಿ ವತಿಯಿಂದ ಸಂಬಂಧ ಪಟ್ಟ ಇಲಾಖೆಯ ಗಮನ ಸೆಳೆಯಲು ಹಾಗೂ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಹೋರಾಟ ನಡೆಸಬೇಕಾಗುತ್ತದೆ ಎಂದು ಕೃಷ್ಣಪ್ರಸಾದ್ ಅಡ್ಯಂತಾಯ ಅವರು ದೂರಿನಲ್ಲಿ ತಿಳಿಸಿದ್ದಾರೆ.
► ಉದ್ಯಮಿ, ಅಧಿಕಾರಿಗಳಿಗೆ ಕಿರುಕುಳ ನೀಡಿದ ಆರೋಪ ಸತ್ಯಕ್ಕೆ ದೂರವಾದುದು, ಇದು ನನ್ನ ವಿರುದ್ಧ ನಡೆದ ಷಡ್ಯಂತ್ರ: ಕೆ. ವೆಂಕಟೇಶ ಕಾರಂತ್ – https://kundapraa.com/?p=54835 .