ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡಬಿದಿರೆ: ಇಂದಿನ ಸ್ಪರ್ಧಾತ್ಮಕ ಯುಗದ ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಅಸ್ಥಿತ್ವವನ್ನು ಛಾಪಿಸಬೇಕಾದರೆ ಪ್ರತಿಯೊಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿಯೂ ಸೂಪರ್ ಮೆಂಟಾಲಿಟಿಯ (ಉತ್ಕೃಷ್ಟ ಮನೋಭಾವ) ಇಂಜಿನಿಯರ್ ಆಗಬೇಕೆ ಹೊರತು ನಾರ್ಮಲ್ ಮೆಟಾಲಿಟಿಯ ಇಂಜಿನಿಯರ್ನಿಂದ (ಸಾಧಾರಣ ಮನೋಭಾವ) ಸಾಧ್ಯವಿಲ್ಲ ಎಂದು ಬೆಂಗಳೂರಿನ ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಜೇಷನ್( ಡಿಆರ್ಡಿಒ)ನ ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ನ ತಾಂತ್ರಿಕ ನಿರ್ದೇಶಕ ಡಾ ಎಸ್ ರಾಮಚಂದ್ರ ತಿಳಿಸಿದರು.
ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ- ‘ಆಳ್ವಾಸ್ ಆಗಮನ 2021-22’ನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಆರಂಭದಲ್ಲೆ ತನ್ನ ಗುರಿಯನ್ನು ನಿಗದಿಪಡಿಸಿಕೊಂಡು, ಆ ಗುರಿಯನ್ನು ಸಾಧಿಸಲು ತನ್ನ ಬಳಿಯಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು. ಮಾಡುವ ಎಲ್ಲಾ ಕೆಲಸವೂ ಉತ್ಕೃಷ್ಟ ಮಟ್ಟದ ಫಲಿತಾಂಶವನ್ನೆ ನೀಡುವಂತಿರಬೇಕು. ೨೦೨೫ರ ಹೊತ್ತಿಗೆ ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ವಿಫುಲ ಅವಕಾಶಗಳು ಲಭಿಸುವ ಸಾಧ್ಯತೆ ಇರುವುದರಿಂದ ಆ ನಿಟ್ಟಿನಲ್ಲಿ ಕರ್ಯಪ್ರವೃತ್ತರಾಗಬೇಕು ಎಂದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ “ವಿದ್ಯಾರ್ಥಿಗಳಿಂದಲೇ ಈ ಸಂಸ್ಥೆ ಇಷ್ಟು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ. ಇಲ್ಲಿ ವ್ಯಾಸಂಗ ಮಾಡುವ ಮಕ್ಕಳೇ ಈ ವಿದ್ಯಾ ಸಂಸ್ಥೆಯ ಶಕ್ತಿ.”ನೀವು ಈಗ ಇರುವ ಸ್ಥಾನ ಕೇವಲ ನಿಮ್ಮ ಪರಿಶ್ರಮವಲ್ಲ. ಅದು ನಿಮ್ಮ ಪೋಷಕರ ನಿರಂತರ ಶ್ರಮ ಮತ್ತು ಕನಸು. ಹಾಗಾಗಿ ನಿಮ್ಮಲ್ಲಿರುವ ಸಾಮರ್ಥ್ಯ ಸಾಬೀತುಪಡಿಸಿ, ನಿಮ್ಮ ಗುರಿ ತಲುಪಬೇಕು” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್ ಪ್ರಸ್ತಾವಿಕ ನುಡಿಗಳನ್ನಾಡಿ, ನಿಮ್ಮ ವಿದ್ಯಾಭ್ಯಾಸದ ನಂತರದ ಸರಿಸುಮಾರು ೪೦ ವರ್ಷಗಳ ಜೀವನ ಆನಂದದಿಂದ ಕೂಡಿರಬೇಕೆಂದರೆ ವಿದ್ಯಾರ್ಥಿದೆಸೆಯ ನಾಲ್ಕು ವರ್ಷಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಪಕ ವಾಸುದೇವ್ ಶಹಾಪುರ್ ಕಾರ್ಯಕ್ರಮನಿರ್ವಹಿಸಿ, ಕಾಲೇಜಿನ ವಿಧ್ಯಾರ್ಥಿ ತಂಡ- ಧ್ವನಿ ಪ್ರಾರ್ಥಿಸಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ ಮಂಜುನಾಥ್ ಕೊಠಾರಿ ಸ್ವಾಗತಿಸಿ, ಉಪನ್ಯಾಸಕಿ ನಿಶಾ ಅತಿಥಿಯನ್ನು ಪರಿಚಯಿಸಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಅಜಿತ್ ಹೆಬ್ಬಾರ್ ವಂದಿಸಿದರು.