ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಕುಂದಾಪುರ, ಬ್ರಹ್ಮಾವರ ಮತ್ತು ಉಡುಪಿ ತಾಲೂಕುಗಳ ವ್ಯಾಪ್ತಿಯಲ್ಲಿನ ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಪ್ರದೇಶಗಳ ವಾರಾಹಿ, ಸೌಪರ್ಣಿಕಾ, ಸ್ವರ್ಣಾ ಮತ್ತು ಸೀತಾ ನದಿ ಪಾತ್ರಗಳಲ್ಲಿ ಮರಳು ದಿಬ್ಬ ತೆರವುಗೊಳಿಸಲು ಅನುಮತಿ, ತಾತ್ಕಾಲಿಕ ಪರವಾನಿಗೆ ಹಾಗೂ ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ಝಡ್) ಪ್ರದೇಶದ ನದಿ ಪಾತ್ರಗಳಲ್ಲಿ ಮರಳುಗಾರಿಕೆ ನಡೆಸಲು ಮರಳು ಗಣಿ ಗುತ್ತಿಗೆಗಳನ್ನು ನೀಡಲಾಗಿದ್ದು, ಹೊರ ಜಿಲ್ಲೆಗೆ ಮರಳು ಪೂರೈಸಲು ಅವಕಾಶವಿರುವುದಿಲ್ಲ.
ಜಿಲ್ಲೆಯ ಕಟ್ಟಡ ನಿರ್ಮಾಣ ಮಾಲೀಕರು ಹಾಗೂ ಗುತ್ತಿಗೆದಾರರು ಮಂಜೂರಾದ ಕಟ್ಟಡದ ಕಾಮಗಾರಿಗಳ ಅವಶ್ಯಕತೆಗನುಗುಣವಾಗಿ ಗಣಿ ಗುತ್ತಿಗೆ ಮತ್ತು ತಾತ್ಕಾಲಿಕ ಪರವಾನಿಗೆ ಪಡೆದ ಪರವಾನಿಗೆದಾರರಿಂದ ಉಪಖನಿಜಕ್ಕೆ (ಸಾಮಾನ್ಯ ಮರಳು) ರವಾನೆ, ಸಾಗಾಟ ಪರವಾನಿಗೆ ಪಡೆದು ಬಳಸಬೇಕು.
ಕರಾವಳಿ ನಿಯಂತ್ರಣ ವಲಯ ಹೊರತುಪಡಿಸಿದ (ನಾನ್ ಸಿಆರ್ಝಡ್) ಹಾಗೂ ಕರಾವಳಿ ನಿಯಂತ್ರಣ ವಲಯದ (ಸಿಆರ್ಝಡ್) ನದಿ ಪಾತ್ರಗಳಲ್ಲಿ ಅನಧಿಕೃತ ಮರಳು ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನು ಮಾಡುವುದು ಹಾಗೂ ಮಾಡಿರುವುದು ಕಂಡುಬಂದಲ್ಲಿ ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಹಾಗೂ ಅನಧಿಕೃತ ಮರಳು ಗಣಿಗಾರಿಕೆಗೆ ಬಳಸುವ ನಾಡ ದೋಣಿಗಳು ನದಿಯಲ್ಲಿ ಕಂಡುಬಂದಲ್ಲಿ ಸದರಿ ನಾಡದೋಣಿಗಳನ್ನು, ಇತರೆ ಸ್ವತ್ತುಗಳನ್ನು ಹಾಗೂ ಅನಧಿಕೃತ ಮರಳು ಸಾಗಾಣಿಕೆಗೆ ಬಳಸುವ ವಾಹನಗಳನ್ನು ಸಹ ವಶಕ್ಕೆ ಪಡೆದು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಕ್ರಮವಹಿಸಲಾಗುವುದೆಂದು ಎಂದು ಹಿರಿಯ ಭೂವಿಜ್ಞಾನಿ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
► ಉಡುಪಿ: ಇ-ಸ್ಯಾಂಡ್ ಆಪ್ ಮೂಲಕ ಮರಳು ಲಭ್ಯ – https://kundapraa.com/?p=54859 .