ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಡಕ್ಷನ್ ಕಾರ್ಯಕ್ರಮದ ಪ್ರಯುಕ್ತ ‘ಯಶಸ್ಸಿನ ಗುಟ್ಟು’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆರ್ಟ್ ಆಫ಼್ ಲಿವಿಂಗ್ ಪ್ರತಿನಿಧಿ ಪ್ರಶಾಂತ್ ಪೈ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿಗೆ ಮನಸ್ಸು ಬಹಳ ಪ್ರಮುಖ ಪಾತ್ರ ವಹಿಸುತ್ತದೆ, ಮನಸ್ಸಿನ ಸ್ಪಷ್ಟತೆ, ಏಕಾಗ್ರತೆ, ಬದ್ಧತೆ ಹಾಗೂ ಆತ್ಮವಿಶ್ವಾಸ ಈ ನಾಲ್ಕು ವಿಚಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸದಾಕಾಲವೂ ಲಭಿಸುತ್ತದೆ ಎಂದು ಅಭಿಪ್ರಾಯ ತಿಳಿಸಿದರು..
ಪ್ರಾಣಾಯಾಮ ಮತ್ತು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುವ ಜೊತೆಗೆ ಪ್ರಾಣಾಯಾಮದ ಪ್ರಯೋಗವನ್ನು ಕಲಿಸಿದರು.
ಕಾಲೇಜಿನ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಅಕಾಡೆಮಿಕ್ ಡೀನ್ ಉಪಸ್ಥಿತರಿದ್ದರು. ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ತೃತೀಯ ವರ್ಷದ ವಿಧ್ಯಾರ್ಥಿನಿಯರಾದ ಮಾಧುರಿ ಹಾಗೂ ಕಾವ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.










