ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತಗ್ಗರ್ಸೆಯಲ್ಲಿ ಮಣ್ಣಿನಲ್ಲಿ ಹೂತು ಹೋಗಿದ್ದ ವಿಜಯನಗರ ಕಾಲದ ಅಪರೂಪದ ವೀರಗಲ್ಲನ್ನು ತಗ್ಗರ್ಸೆ ಟಿ. ನಾರಾಯಣ ಹೆಗ್ಗೆ ಕುಟುಂಬದವರ ಸಹಕಾರದಲ್ಲಿ ಶಿರ್ವದ ಎಂಎಸ್ಆರ್‌ಎಸ್ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳು ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಮಾರ್ಗದರ್ಶನದಲ್ಲಿ ಹೊರ ತೆಗೆಯಲಾಗಿದೆ.
ಸುಮಾರು 5 ಅಡಿ ಎತ್ತರದ ಈ ವೀರಗಲ್ಲು ಆಯತಾಕಾರದಲ್ಲಿದ್ದು, ನಾಲ್ಕು ಚಿತ್ರಪಟ್ಟಿಕೆಗಳನ್ನು ಒಳಗೊಂಡಿದೆ. ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಕೈಯಲ್ಲಿ ಖಡ್ಗ ಮತ್ತು ಗುರಾಣಿ ಹಿಡಿದು ಪರಸ್ಪರ ಎದುರು ಬದುರಾಗಿ ನಿಂತಿದ್ದಾರೆ. ಅವರ ಹಿಂದೆ ಇಬ್ಬರು ಸೇವಕರು ನಿಂತಿರುವಂತೆ ಚಿತ್ರಿಸಲಾಗಿದೆ.
ಮೇಲಿನ ಎರಡು ಪಟ್ಟಿಕೆಗಳಲ್ಲಿಯೂ ಇದೇ ಚಿತ್ರಗಳು ಪುನರಾವರ್ತನೆಯಾಗಿವೆ ಮೊದಲಿನ ಚಿತ್ರಪಟ್ಟಿಕೆಯಲ್ಲಿ ಮಧ್ಯದಲ್ಲಿ ಶಿವಲಿಂಗ ಎಡಬದಿಯಲ್ಲಿ ಕುಳಿತ ಭಂಗಿಯಲ್ಲಿರುವ ನಂದಿ ಮತ್ತು ಬಲಬದಿಯಲ್ಲಿ ಅಂಜಲಿಬದ್ದನಾಗಿ ನಿಂತಿರುವ ವ್ಯಕ್ತಿಯ ಚಿತ್ರಣವಿದೆ. ಮೇಲಿನ ಪಟ್ಟಿಕೆಯ ಮೇಲ್ಬಾಗವನ್ನು ಕುದುರೆ ಲಾಳಾಕೃತಿಯ ವಿನ್ಯಾಸಗೊಳಿಸಲಾಗಿದ್ದು ಮಧ್ಯದಲ್ಲಿ ಸಿಂಹ ಲಾಂಛನವಿದೆ.
ಶಾಸನದಲ್ಲಿನ ಕೆಲವೇ ಕೆಲವು ಅಕ್ಷರಗಳನ್ನು ಗುರುತಿಸಲು ಸಾದ್ಯವಾಗಿದೆ. ಅ, – ಗ, ತ, ಅಕ್ಷರಗಳು ಸ್ಪಷ್ಟವಾಗಿ ವಿಜಯನಗರದ ಶೈಲಿಯಲ್ಲಿರುವುದರಿಂದ ಶಾಸನವು ವಿಜಯನಗರ ಕಾಲದ ಶಾಸನವೆಂದು ನಿರ್ಧರಿಸಬಹುದಾಗಿದೆ ಎಂದು ಪ್ರೋ ಮುರುಗೇಶಿ ವಿವರಿಸಿದ್ದಾರೆ. ಶಾಸನಾಧ್ಯಯನದಲ್ಲಿ ಮುರುಳೀಧರ ಹೆಗ್ಡೆ, ವಿದ್ಯಾರ್ಥಿಗಳಾದ ಗಣೇಶ್, ಶ್ರೇಯಸ್ ಮತ್ತು ಗೌತಮ್ ಹಾಗೂ ತಗ್ಗರ್ಸೆ ಟಿ. ನಾರಾಯಣ ಹೆಗ್ಡೆಯವರ ಕುಟುಂಬಸ್ಥರು ಸಹಕರಿಸಿದ್ದಾರೆ.