ಕುಂದಾಪ್ರ ಡಾಟ್ ಕಾಂ ಸುದ್ದಿ.
ಶಂಕರನಾರಾಯಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ).ಕುಂದಾಪುರ ತಾಲೂಕು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನ ಕೇಂದ್ರ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಆಶ್ರಯದಲ್ಲಿ 1488ನೇ ಮದ್ಯವರ್ಜನ ಶಿಬಿರ ಶಂಕರನಾರಾಯಣದ ಶ್ರೀ ಸುಬ್ರಹ್ಮಣ್ಯ ಜೋಯಿಶಿ ಸುವರ್ಣ ಸಭಾಭವನದಲ್ಲಿ ಬುಧವಾರ ಜರುಗಿತು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಶಿಬಿರ ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಡೆದ 1487 ಶಿಬಿರಗಳಿಂದ ಈಗಾಗಲೇ 1.2 ಲಕ್ಷಕ್ಕೂ ಹೆಚ್ಚು ಜನರು ಮದ್ಯವ್ಯಸನದಿಂದ ಮುಕ್ತವಾಗಿದ್ದು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಪರಮಪೂಜ್ಯ ಧರ್ಮಾಧಿಕಾರಿ ಶ್ರೀ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀಯವರ ಆಶಯದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ಶಿಬಿರದ ಪ್ರಯೋಜನ ಪಡೆದು ಶಿಬಿರಾರ್ಥಿಗಳು ವ್ಯಸನಮುಕ್ತರಾಗಿ ನೆಮ್ಮದಿಯ ಜೀವನ ನಡೆಸಲು ಕರೆ ನೀಡಿದರು.
1488ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಕಲ್ಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿಯಾದ ಶ್ರೀಧರ ನಾಯ್ಕ, ಧರ್ಮದರ್ಶಿ ಲಕ್ಷ್ಮೀನಾರಾಯಣ ಉಡುಪ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲತಾ ಡಿ.ಎಸ್, ಉಪಾಧ್ಯಕ್ಷರಾದ ರವಿ ಕುಲಾಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಶ್ಯಾಡಿ ಗುಂಡಿ, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಅಂಪಾರು ಜನಜಾಗೃತಿ ವಲಯಾಧ್ಯಕ್ಷ ಸುರೇಶ್ ಹೆಬ್ಬಾರ್ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿ ಗೌರವ ಧ್ಯಕ್ಷ ದಯಾನಂದ ರಾವ್ ಸ್ವಾಗತಿಸಿದರು. ಜನಜಾಗೃತಿ ವೇದಿಕೆ ಪ್ರಾದೇಶಿಕ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಹಾಲಾಡಿ ವಲಯದ ಮೇಲ್ವಿಚಾರಕರಾದ ಸಂತೋಷ್ ವಂದಿಸಿದರು. ಮೇಲ್ವಿಚಾರಕರಾದ ಮಾಲತಿ ಕಾರ್ಯಕ್ರಮ ನಿರ್ವಹಿಸಿದರು.