ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಡಿ.1: ಕಾಡಿನೊಳಕ್ಕೆ ಎಸೆದಿದ್ದ ನವಜಾತ ಶಿಶುವನ್ನು, ಸ್ಥಳೀಯ ಮಹಿಳೆಯೂರ್ವರು ಗುರುತಿಸಿ ರಕ್ಷಿಸಿರುವ ಘಟನೆ ತಾಲೂಕಿನ ಮಚ್ಚಟ್ಟು ಗ್ರಾಮದಲ್ಲಿ ನಡೆದಿದೆ. ಪೋಷಕರು ಎಸೆದು ಹೋಗಿದ್ದ ಹಸುಳೆಯನ್ನು ಮಚ್ಚಟ್ಟು ಗ್ರಾಮದ ಮಡಿವಾಳಕಟ್ಟು ನಿವಾಸಿ ಗೀತಾ ಎಂಬುವವರು ರಕ್ಷಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬುಧವಾರ ಸಂಜೆ 4:30ರ ವೇಳೆಗೆ ಕುಂದಾಪುರ ತಾಲೂಕು ಮಚ್ಚಟ್ಟು ಗ್ರಾಮದ ಸೇತುವೆ ಸಮೀಪ ಹಾಲು ಡೈರಿಗೆ ತೆರಳುತ್ತಿದ್ದ ಗೀತಾ, ಕಾಡಿನ ಪೊದೆಯಲ್ಲಿ ಮಗು ಅಳುತ್ತಿರುವ ಧ್ವನಿ ಕೇಳಿ ಹತ್ತಿರ ಹೋಗಿ ನೋಡಿದಾಗ ಹೆಣ್ಣು ಮಗುವೊಂದು ಅನಾಥವಾಗಿ ಬಿದ್ದಿತ್ತು. ನಿರ್ಜನ ಪ್ರದೇಶದಲ್ಲಿದ್ದ ಮಗುವನ್ನು ಎತ್ತಿಕೊಂಡು ಬಂದ ಮಹಿಳೆ ಅಮಾಸೆಬೈಲು ಪೊಲೀಸ್ ಠಾಣೆಗೆ ತಂದು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಮಗುವಿನ ತಂದೆ -ತಾಯಿ ಮಗುವಿನ ಪಾಲನೆ ಪೋಷಣೆ ಮಾಡದೆ ಅಪಾಯಕರ ಸ್ಥಿತಿಯಲ್ಲಿ ಎಸೆದು ಹೋಗಿದ್ದಾರೆಂದು ಮಗುವನ್ನು ರಕ್ಷಿಸಿದ ಮಹಿಳೆ ದೂರು ದಾಖಲಿಸಿ, ಅಮಾಸೆಬೈಲು ಠಾಣಾ ಪಿಎಸ್ಐ ಸುಬ್ಬಣ್ಣ ಹಾಗೂ ಸಿಬ್ಬಂದಿಗಳಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ರಕ್ಷಿಸಲಾದ ಏಳು ದಿನಗಳ ನವಜಾತ ಶಿಶುವನ್ನು ಸದ್ಯ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.