ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾದ ಆ್ಯಂಬುಲೆನ್ಸ್’ಗೆ ತಾತ್ಕಾಲಿಕ ನೆಲೆಯಲ್ಲಿ ಚಾಲಕನನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಚಾಲಕನ ಸಂಬಳ ಹಾಗೂ ಡಿಸೆಲ್ ವೆಚ್ಚವನ್ನು ಭರಿಸಲು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಮ್ಯಾನೇಜಿಂಗ್ ಟ್ರಸ್ಟೀ ಡಾ. ಗೋವಿಂದ ಬಾಬು ಪೂಜಾರಿ ಅವರು ಮುಂದೆ ಬಂದಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಹೆಚ್ ಅವರು ಟ್ರಸ್ಟ್’ಗೆ ಮಾಡಿದ್ದ ಮನವಿಗೆ ಸ್ಪಂದಿಸಿ ಸರಕಾರದಿಂದ ನೇಮಕಾತಿ ಆಗುವ ತನಕ ತಾತ್ಕಾಲಿಕವಾಗಿ ಓರ್ವ ಆ್ಯಂಬುಲೆನ್ಸ್ ಚಾಲಕನ ಸಂಬಳ ಹಾಗೂ ಡಿಸೇಲ್ ವೆಚ್ಚ ಭರಿಸಿಕೊಡಲು ಟ್ರಸ್ಟ್ ಒಪ್ಪಿಗೆ ಪತ್ರವನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಒಪ್ಪಿಗೆ ಪತ್ರ ಹಸ್ತಾಂತರಿಸಿ ಮಾತನಾಡಿದ ಡಾ. ಗೋವಿಂದ ಬಾಬು ಪೂಜಾರಿ ಅವರು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಮೂಲಭೂತ ಸೌಕರ್ಯಗಳು ಹೆಚ್ಚಿಸುವುದರ ಜೊತೆಗೆ ಬಡಜನರಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ಆಗಬೇಕು. ಡಿ.ಹೆಚ್.ಓ ಅವರ ಮನವಿಯಂತೆ ಓರ್ವ ಅಂಬ್ಯುಲೆನ್ಸ್ ಚಾಲಕನ ಸಂಬಳ ಹಾಗೂ ಡಿಸೆಲ್ ವೆಚ್ಚವನ್ನು ಸದ್ಯ ಭರಿಸುತ್ತಿದ್ದು, ಅಗತ್ಯವಿದ್ದರೆ ಇನ್ನೋರ್ವ ಚಾಲಕನ ಸಂಬಳವನ್ನು ಟ್ರಸ್ಟ್ ಮೂಲಕ ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭ ಪ್ರಭಾರ ತಾಲೂಕು ಆರೋಗ್ಯಾಧಿಕಾರಿ ಡಾ. ಉಮೇಶ್ ನಾಯಕ್, ಟ್ರಸ್ಟ್ ಸದಸ್ಯರಾದ ಸುಧಾಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:
► ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಎರಡು ಅಂಬ್ಯುಲೆನ್ಸ್ ಹಸ್ತಾಂತರ – https://kundapraa.com/?p=51895 .

















