ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇನ್ನೊಬ್ಬರ ಕಷ್ಟಗಳನ್ನು ನಮ್ಮ ಕಷ್ಟ ಎಂಬ ಭಾವನೆಯೊಂದ ಸೇವೆ ಸಲ್ಲಿಸಿದಾಗ ಸಾರ್ಥಕ್ಯ ದೊರೆಯುತ್ತದೆ. ನಾವು ದುಡಿದ ಒಂದು ಭಾಗವನ್ನು ಸಮಾಜಕ್ಕೆ ನೀಡಿದಾಗ ಅದರ ಪ್ರತಿಫಲವೂ ಸಿಕ್ಕೆ ಸಿಗುತ್ತದೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಅವರು ಹೇಳಿದರು.
ಅವರು ಬೈಂದೂರಿನ ಶಾರದಾ ವೇದಿಕೆಯಲ್ಲಿ ಜೇಸಿಐ ಬೈಂದೂರು ಸಿಟಿ ಇದರ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ ಜೇಸಿ ಸಂಭ್ರಮ 2021 ಉದ್ಘಾಟಿಸಿ ಮಾತನಾಡಿ ಜೇಸಿ ಸಂಸ್ಥೆ ಯುವ ಜನತೆಯಲ್ಲಿ ವ್ಯಕ್ತಿತ್ವ ನಿರ್ಮಾಣ ಮಾಡುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಶ್ರಮವಹಿಸುತ್ತಿರುವುದು ಶ್ಲಾಘನೀಯ ಎಂದರು.
ಮಂಗಳೂರು ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಶ್ರೀಧರ ಪಿ ಅವರಿಗೆ ಈ ಬಾರಿ ಜೇಸಿ ಸಾಧನಶ್ರೀ ಪ್ರಶಸ್ತಿ ಪುರಸ್ಕಾರ ನೀಡಿ, ಗೌರವಿಸಲಾಯಿತು. ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಜೇಸಿಐ ಬೈಂದೂರು ಸಿಟಿಯ ಅಧ್ಯಕ್ಷ ಪಿ ಶ್ರೀಧರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ರಾಜೇಶ್ ಐತಾಳ್ ಬೈಂದೂರು, ಜೇಸಿ ಪೂರ್ವ ವಲಯಾಧ್ಯಕ್ಷ ಆಲನ್ ರೋಹನ್ ವಾಜ್ ಉದ್ಯಾವರ, ಲಾವಣ್ಯ ರಿ ಬೈಂದೂರು ಅಧ್ಯಕ್ಷ ಹರೆಗೋಡು ಉದಯ್ ಆಚಾರ್, ಸುರಭಿ ರಿ ಬೈಂದೂರು ಅಧ್ಯಕ್ಷ ನಾಗರಾಜ್ ಪಿ. ಯಡ್ತರೆ, ಜೇಸಿಐ ಬೈಂದೂರು ಸಿಟಿಯ ಜೇಸಿರೇಟ್ ಅಧ್ಯಕ್ಷೆ ಅನಿತಾ ಆರ್. ಕೆ ಮರವಂತೆ ವೇದಿಕೆಯಲ್ಲಿದ್ದರು.
ಜೇಸಿ ಸಂಭ್ರಮ 2021ರಲ್ಲಿ ಬೆಸ್ಟ್ ಮೆನ್ ಪ್ರಶಸ್ತಿಯನ್ನು ಯು ರಾಘವೇಂದ್ರ ಹೊಳ್ಳ ಹಾಗೂ ಬೆಸ್ಟ್ ಹುಮೆನ್ ಪ್ರಶಸ್ತಿಯನ್ನು ಚೈತ್ರಾ ಸತೀಶ್ ಅವರಿಗೆ ನೀಡಲಾಯಿತು. ಜೇಸಿಐ ಬೈಂದೂರು ಸಿಟಿಯ ಸ್ಥಾಪಕ ಕಾರ್ಯದರ್ಶಿ ಹರೆಗೋಡು ಸುಶಾಂತ್ ಆಚಾರ್ ಇವರಿಗೆ ಯುವ ಜೇಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೇಸಿಐ ಬೈಂದೂರು ಸಿಟಿಯ ಸ್ಥಾಪಕಾಧ್ಯಕ್ಷ ಮಣಿಕಂಠ ಎಸ್ ಪ್ರಾಸ್ತಾವಿಕ ಮಾತನಾಡಿದರು, ಭಾನುಮತಿ ಜಯಾನಂದ ಬಿ.ಕೆ ಜೇಸಿವಾಣಿ ವಾಚಿಸಿದರು. ಜೇಸಿಐ ಸದಸ್ಯರಾದ ಸತೀಶ್ ಎಮ್ ಹಾಗೂ ಚೈತ್ರಾ ಸತೀಶ್ ಕಾರ್ಯಕ್ರಮ ನಿರೂಪಿಸಿದರು. ಜೇಸಿಐ ಬೈಂದೂರು ಸಿಟಿಯ ಕಾರ್ಯದರ್ಶಿ ಸವಿತಾ ದಿನೇಶ್ ಗಾಣಿಗ ವಂದಿಸಿದರು.
ಬಳಿಕ ಕುಂದಾಪುರ ಮೂರುಮುತ್ತು ಕಲಾತಂಡದವರಿಂದ ಹಾಸ್ಯಮಯ ನಗೆ ನಾಟಕ ಪ್ರದರ್ಶನಗೊಂಡಿತು.