ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸದುದ್ಧೇಶದಿಂದ ಕಾರ್ಯಕ್ರಮಕ್ಕೆ ಮುಂದಡಿ ಇಟ್ಟರೆ ಕಾರ್ಯಗಳು ಸಂಪನ್ನವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯ ಯಶಸ್ವಿ-25ಬೆಳ್ಳಿ ಹಬ್ಬದ ಆಚರಣೆಗಾಗಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಅಟ್ಟಣಿಗೆ ಯಕ್ಷಗಾನವನ್ನು ಏರ್ಪಡಿಸಿ ಅಸಾಧಾರಣ ಸಾಧನೆಗೆ ನಾಂದಿ ಹಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಉದ್ಯಮಿ ಕೃಷ್ಣಮೂರ್ತಿ ಮಂಜ ಹೇಳಿದರು.
ಅವರು ಯಶಸ್ವಿ ಕಲಾವೃಂದದ ನೇತೃತ್ವದಲ್ಲಿ ಕುಂದಾಪುರ ನೆಹರೂ ಮೈದಾನದಲ್ಲಿ ಜರುಗಿದ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಧರ್ಮಾಧರ್ಮ ಸಂಘರ್ಷ ಯಕ್ಷಗಾನ ಕಾರ‍್ಯಕ್ರಮದಲ್ಲಿ ಹಿರಿಯ ಕಲಾವಿದ ರಾಜ್ಯ ಪ್ರಶಸ್ತಿ ಪುರಸ್ಕೃತ ತೀರ್ಥಳ್ಳಿ ಗೋಪಾಲ ಆಚಾರ್ ಇವರನ್ನು ಸನ್ಮಾನಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಲ್ಯಾಡಿ ಶಿವರಾಮ ಶೆಟ್ಟಿ, ರಮೇಶ್ ರಾವ್ ಪಾಂಡೇಶ್ವರ, ಸಂಘಟಕ ರಾಮಕೃಷ್ಣ ಹೇರ್ಳೆ, ಜನಾರ್ಧನ ಹಂದೆ, ಪಂಚ ಮೇಳಗಳ ಯಜಮಾನ ಕಿಶನ್ ಹೆಗ್ಡೆ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊಕೂರು ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಗೋಪಾಲ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅಟ್ಟಣಿಗೆ ವೇದಿಕೆಯಲ್ಲಿ ಧರ್ಮಾಧರ್ಮ ಸಂಘರ್ಷ-ಪೌರಾಣಿಕ ಮೂರು ಕಥಾ ಹಂದರ ರಂಗದಲ್ಲಿ ಪ್ರದರ್ಶನಗೊಂಡಿತ್ತು.