ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಗ್ರಾಮೀಣ ಹವಾಮಾನ ಸೇವಾ ಯೋಜನೆ ಹಾಗೂ ಶ್ರೀ ಮೂಕಾಂಬಿಕಾ ಆತ್ಮ ರೈತರ ಸಂಘ ಗೋಳಿಹೊಳೆ ವತಿಯಿಂದ ಗೋಳಿಹೊಳೆ ಗ್ರಾಮದಲ್ಲಿ ರೈತರಿಗೆ ಹವಾಮಾನ ಬದಲಾವಣೆ ಮತ್ತು ಕೃಷಿ ಕುರಿತಾದ ರೈತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರದ ಸಹ ಸಂಶೋಧನಾ ನಿರ್ದೇಶಕರಾದ ಡಾ. ಲಕ್ಷ್ಮಣ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಹವಾಮಾನದಿಂದ ಕೃಷಿಯಲ್ಲಿ ಅನೇಕ ರೀತಿಯ ತೊಂದರೆಗಳು ಎದುರಾಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ ಇದರ ಪರಿಣಾಮವಾಗಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಈ ರೀತಿಯ ನಷ್ಟಗಳನ್ನು ಹಿಮ್ಮೆಟ್ಟಿ ಕೃಷಿಯಲ್ಲಿ ಲಾಭ ಗಳಿಸಬೇಕೆಂದರೆ ರೈತರು ಕೃಷಿಯಲ್ಲಿ ಲಭ್ಯವಿರುವ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಹವಾಮಾನ ವೈಪರೀತ್ಯದಿಂದ ಗೇರು ಬೆಳೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ರೈತರು ಪಾಲಿಸಬೇಕಾದ ಕೃಷಿ ಚಟುವಟಿಕೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಮೇಘಧೂತ್ ತಾಂತ್ರಿಕ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಧನಂಜಯ. ಬಿ, ಇತ್ತೀಚಿನ ದಿನಗಳಲ್ಲಿ ಹವಾಮಾನ ಮುನ್ಸೂಚನೆಯನ್ನು ಆಧರಿಸಿ ಕೃಷಿ ಮಾಡುವುದು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಮೇಘಧೂತ್ ಮೊಬೈಲ್ ಆಪ್ ಹೆಚ್ಚು ಸಹಕಾರಿಯಾಗಿದೆ ಎಂದರು. ಜಿ.ಕೆ.ಎಂ.ಎಸ್ ಹಾಗೂ ನೈಸರ್ಗಿಕ ಕೃಷಿ ಯೋಜನೆಯ ಪ್ರಧಾನ ಸಂಶೋಧಕರಾಧ ಡಾ.ಕೆ.ವಿ.ಸುಧೀರ್ ಕಾಮತ್ ರವರು ರೈತರಿಗೆ ಅಡಿಕೆ,ತೆಂಗು ಹಾಗೂ ಬಾಳೆ ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಕುರಿತಾದ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ರೈತ ಸಂಪರ್ಕ ಕೇಂದ್ರದ ಬೈಂದೂರಿನ ಕೃಷಿ ಅಧಿಕಾರಿಗಳಾದ ಗಾಯತ್ರಿ ಯವರು ರೈತರಿಗೆ ಕೃಷಿ ಇಲಾಖೆಯಿಂದ ಲಭ್ಯವಿರುವ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು.
ಅನಂತರ ತಾಂತ್ರಿಕ ಮಾಹಿತಿಯನ್ನು ನೀಡಿದ ಪ್ರವೀಣ್ ಕೆ.ಎಂ ರವರು ಭಾರತೀಯ ಹವಾಮಾನ ಇಲಾಖೆಯು ರೈತರಿಗೆ ಹವಾಮಾನ ಮುನ್ಸೂಚನೆಯ ಜೊತೆಗೆ ಸೂಕ್ತ ಬೆಳೆ ಸಲಹೆ ನೀಡುವ ಸಲುವಾಗಿ ಮೇಘಧೂತ್ ಆಪ್ ಅನ್ನು ಬಿಡುಗಡೆಗೊಳಿಸಿದೆ ರೈತರು ಈ ಆಪ್‌ನ ಸದುಪಯೋಗ ಪಡಿಸಿಕೊಳ್ಳಬೇಕೆಂದು ನೆರೆದಿದ್ದ ರೈತರಿಗೆ ಕಿವಿಮಾತು ಹೇಳಿದರು. ಶ್ರೀ.ಸಂದೇಶ್ ಪೂಜಾರಿ, ಗೌರವಾಧ್ಯಕ್ಷರು, ಶ್ರೀ ಮೂಕಾಂಬಿಕಾ ಆತ್ಮ ರೈತರ ಸಂಘ,ಗೋಳಿಹೊಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ.ಕುಪ್ಪಯ್ಯನಾಯಕ್ ಹಾಗೂ ಶ್ರೀ.ಶೇಖರ್ ಪೂಜಾರಿಯವರು ನೆರೆದಿದ್ದ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದರು.
ಈ ಕಾರ್ಯಕ್ರಮವನ್ನು ಡಾ. ಸಂತೋಷ್ ಗೌಡ ಜಿ.ಬಿ ನಿರೂಪಿಸಿದರು ಹಾಗೂ ಕೇಂದ್ರದ ವಿಜ್ಞಾನಿಗಳಾದ ಡಾ.ಸುನೀಲ್ ಕುಮಾರ್.ಕೆ, ಡಾ.ಮಹಂತೇಶ್.ಪಿ.ಎಸ್, ಸ್ವಾತಿ ಶೆಟ್ಟಿ ಹಾಗೂ ಹವಾಮಾನ ಘಟಕದ ಪರಿವೀಕ್ಷಕರಾದ ದಿನೇಶ ಖಾರ್ವಿ ಉಪಸ್ಥಿತರಿರು.