ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಲ್ಲಿ ಕೊರತೆಯಲ್ಲಿ ಆದರೆ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗುತ್ತದೆ ಅಂತಹ ಸಂದರ್ಭದಲ್ಲಿ ಸಮಾಜ ಸ್ಪಂದಿಸುವ, ಅದನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಬ್ಯಾಂಕ್ ಎಂ.ಡಿ ಮಹಾಬಲೇಶ್ವರ ಎಂ. ಎಸ್ ಹೇಳಿದರು.
ಅವರು ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಯು.ಬಿ ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆಗಳ ನೂತನ ಶಾಲಾ ವಾಹನಗಳನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯು. ಬಿ. ಶೆಟ್ಟಿ ನೀಡುತ್ತಿರುವ ಶೈಕ್ಷಣಿಕ ಕೊಡುಗೆ ಅಭಿನಂದನೀಯ. ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ತಂಡ ಆಡಳಿತ ಮಂಡಳಿ ಸಹಕಾರ ಇಲ್ಲಿರುವುದು ತಿಳಿಯುತ್ತದೆ. ಸಾಮಾಜಿಕ ಚಿಂತನೆ ಹಾಗೂ ಕಳಕಳಿ ಇದ್ದಾಗ ಇಂತಹ ಕಾರ್ಯ ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್ (ಐ.ಪಿ.ಎಸ್) ಮಾತನಾಡಿ ವಿದ್ಯೆ ಅತ್ಯಮೂಲ್ಯ ಆಸ್ತಿ. ವಿದ್ಯಾರ್ಥಿಗಳು ಪಾಲಕರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿಯ ಜೊತೆಗೆ ಸಮರ್ಪಕ ಗುರಿಯೊಂದಿಗೆ ಮುನ್ನಡೆಯುವುದು ಅಗತ್ಯ. ಹೀಗಾಗಿ ಶೈಕ್ಷಣಿಕ ಬದುಕನಲ್ಲಿ ವಿದ್ಯಾರ್ಥಿಗಳು ತಪಸ್ಸಿನಂತೆ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಯು.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯು.ಬಿ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹುಟ್ಟೂರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದೇನೆ. ಹೀಗಾಗಿ ಸರ್ವರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಯಶಸ್ಸಿನತ್ತ ಕೊಂಡಿಯ್ಯಬೇಕಿದೆ ಎಂದ ಅವರು ಹದಿನೆಂಟನೇ ವಯಸ್ಸಿನಲ್ಲಿ ಊರನ್ನು ತೊರೆದು ವ್ಯವಹಾರಕ್ಕಾಗಿ ಹುಬ್ಬಳ್ಳಿಗೆ ತೆರಳಿದ್ದೆ. ಬದುಕಿನ ವಿವಿಧ ಸ್ಥರದ ಹೋರಾಟ ಅನುಭವ ಕಲಿಸಿದೆ. ಕಠಿಣ ಪ್ರಯತ್ನ ಪ್ರಾಮಾಣಿಕತೆ ಯಶಸ್ಸು ಕಾಣಲು ಸಾದ್ಯ ಎಂಬುದನ್ನು ಬದುಕು ಕಲಿಸಿದೆ ಎಂದರು.
ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಸಹಾಯಕ ಪ್ರಬಂಧಕ ರಾಜಗೋಪಾಲ ಬಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ ಮುಂದಿನಮನಿ, ಟ್ರಸ್ಟಿ ರಂಜನಾ ಯು. ಬಿ. ಶೆಟ್ಟಿ, ಟ್ರಸ್ಟೀ, ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಶೈಕ್ಷಣಿಕ ಸಂಯೋಜಕ ಸುಬ್ರಹ್ಮಣ್ಯ ಜೋಶಿ ಸ್ವಾಗತಿಸಿದರು. ಯು.ಬಿ.ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಅಮಿತಾ ಶೆಟ್ಟಿ ಹಾಗೂ ಸಹಾಯಕ ಮುಖ್ಯ ಶಿಕ್ಷಕಿ ರಂಜಿತಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಂದೇಶ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಅತಿಥಿಗಳನ್ನು ಸಮ್ಮಾನಿಸಲಾಯಿತು.