ಕುಂದಾ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ 94ಸಿ ಅಡಿ ಸಲ್ಲಿಸಿದ ಅರ್ಜಿಗಳಲ್ಲಿ ಡೀಮ್ ಫಾರೆಸ್ಟ್ ಹಾಗೂ ಭಾಗಶಃ ಡೀಮ್ ಫಾರೆಸ್ಟ್ ಎಂಬ ಕಾರಣಕ್ಕೆ ಭೂ ಮಂಜೂರಾತಿ ತಡೆಹಿಡಿಲಾಗುತ್ತಿದೆ. ಇದರಿಂದ ಕುಂದಾಪುರ, ಬೈಂದೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಕಾಪು, ಹೆಬ್ರಿಗಳಲ್ಲಿ 7,754 ಕುಟುಂಬಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ದೊರೆಯಲೇಬೇಕು, ಸರಕಾರದಿಂದ ಸಮರ್ಪಕ ಉತ್ತರ ದೊರೆಯಬೇಕು ಎಂದು ಕಾಂಗ್ರೆಸ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಪಟ್ಟು ಹಿಡಿದು ಬಾವಿಗಿಳಿದ ಘಟನೆ ವಿಧಾನ ಪರಿಷತ್ ಕಲಾಪದಲ್ಲಿ ನಡೆಯಿತು.
ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೆ. ಪ್ರತಾಪಚಂದ್ರ ಶೆಟ್ಟಿಯ ಅವರು, ಉಡುಪಿ ಜಿಲ್ಲೆಯಲ್ಲಿ ನಮೂನೆ 50, 53ಹಾಗೂ 94ಸಿ ಅಡಿ ಸಲ್ಲಿಸಿದ ಅರ್ಜಿಗಳಲ್ಲಿ ಡೀಮ್ ಫಾರೆಸ್ಟ್ ಹಾಗೂ ಭಾಗಶಃ ಡೀಮ್ಸ್ ಫಾರೆಸ್ಟ್ ಎಂಬ ಕಾರಣಕ್ಕೆ ಭೂ ಮಂಜೂರಾತಿ ತಡೆಹಿಡಿಲಾಗುತ್ತಿದೆ. 94ಸಿ ಕಲಂ ಅಡಿ ಮಂಜೂರಾದ ಮೇಲೆ ಡೀಮ್ಸ್ ಫಾರೆಸ್ಟ್ ನಿಯಮ ಅನ್ವಯಿಸಿ ತೊಂದರೆ ನೀಡುತ್ತಿದ್ದಾರೆ. ಇವತ್ತು ನನಗೆ ಸಮಾಧಾನಕರ ಉತ್ತರ ಸಿಗಬೇಕು. ಇಲ್ಲವಾದರೆ ಈಗಾಗಲೇ ನಾನು ಶಾಲು ತಂದಿದ್ದೇನೆ, ಇಲ್ಲಿಯೇ ಮಲಗುತ್ತೇನೆ ಎಂದರು.
ಅವರು ಸಚಿವರ ಉತ್ತರಕ್ಕೆ ಸಮಾಧಾನಗೊಳ್ಳದ ಅವರು ಈ ರೀತಿಯ ಉತ್ತರಗಳನ್ನು ಮೂರು ನಾಲ್ಕು ಸಚಿವರಿಂದ ಕೇಳಿಕೊಂಡು ಬಂದಿದ್ದೇವೆ. ಕೇಳಿ ಕೇಳಿ ಸಾಕಾಗಿದೆ. ಸರ್ಕಾರವೇ 94 ಸಿ ಫಾರಂ ಪ್ರಕಾರ ಅನುಮತಿ ನೀಡಿದೆ, ಮತ್ತೆ ಮನೆ ಕಟ್ಟಿಕೊಳ್ಳಲು ತಡೆಯುತ್ತಾರೆ ಎಂದರೆ ಹೇಗೆ. ನೀವೆ ಕೊಟ್ಟಿರುವ 94 ಸಿ ಫಾರಂನ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ ರಾಜ್ಯದಲ್ಲಿ 10.11 ಲಕ್ಷ ಹೆಕ್ಟೇರ್ ಡೀಮ್ಸ್ ಫಾರೆಸ್ಟ್ ಜಮೀನು ಪೈಕಿ 6.64 ಲಕ್ಷ ಹೆಕ್ಟೇರ್ ಅನ್ನು ಕಂದಾಯ ಇಲಾಖೆಗೆ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗಿದ್ದು ಅರಣ್ಯ ಇಲಾಖೆಯಿಂದಲೂ ಒಪ್ಪಿಗೆ ದೊರೆತಿದೆ ಎಂದು ಹೇಳಿದರು.
ಡೀಮ್ಡ್ ಫಾರೆಸ್ಟ್ ಎನ್ನುವುದೇ ಅವೈಜ್ಞಾನಿಕ. ಹಿಂದಿನ ಅಧಿಕಾರಿಗಳು ಸರಕಾರಿ ಭೂಮಿಯನ್ನು ಅರಣ್ಯ ಭೂಮಿ ಎಂದು ಅರಣ್ಯ ಇಲಾಖೆ ಕೇಳದಿದ್ದರೂ, ಬರೆದುಕೊಟ್ಟಿದ್ದರಿಂದ ಡೀಮ್ಸ್ ಫಾರೆಸ್ಟ್ ಎಂದಾಯಿತು. ಡೀಮ್ಸ್ ಫಾರೆಸ್ಟ್ ಜಮೀನು ಮರಳಿ ಪಡೆಯುವ ನಿಟ್ಟಿನಲ್ಲಿ 6-7 ತಿಂಗಳುಗಳಿಂದ ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿ ಗಳೊಂದಿಗೆ ವಿಧಾನ ಹಲವು ಸಭೆ ಅಧಿವೇಶನ ನಡೆಸಿದ್ದೇನೆ. 10 ಲಕ್ಷ ಹೆಕ್ಟೇರ್ ನಲ್ಲಿ 6.64 ಲಕ್ಷ ಹೆಕ್ಟರ್ ಅನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ. ಕೆಲವು ಪ್ರಕರಣಗಳು ಸುಪ್ರೀಂ ಕೋರ್ಟ್ನಲ್ಲಿದ್ದು, ಆಫಿದವಿಟ್ ಸಲ್ಲಿಸಲು ಕಾನೂನು ಇಲಾಖೆ ಈಗಾಗಲೇ ಡೀಮ್ಸ್ ಫಾರೆಸ್ಟ್ ಪ್ರದೇಶದಲ್ಲಿ ಉಳುಮೆ ಮಾಡುತ್ತಿದ್ದರೆ ಅಥವಾ ಮನೆ ಕಟ್ಟಿದ್ದರೆ ಅಂತಹವರಿಗೆ ಅರಣ್ಯ ಇಲಾಖೆಯಿಂದ ತೊಂದರೆ ಯಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಸುನಿಲ್ ಕುಮಾರ್ ಅವರು, ಇದು 1993-94ರಲ್ಲಿನ ಸಮಸ್ಯೆ. ಇದರ ಪರಿಹಾರಕ್ಕೆ ಸರಕಾರ ಬದ್ಧವಾಗಿದೆ. ಇದರಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ನಾವು ಸುಮ್ಮನಿದ್ದೇವೆ. ನೀವು ರಾಜಕಾರಣ ಮಾಡಿದರೆ ನಾವು ಮಾಡುತ್ತೇವೆ. ಡಿಮ್ ಫಾರೆಸ್ಟ್ ನಿಮ್ಮ ಸರ್ಕಾರದ ಪಾಪದ ಕೂಸು. ಅದನ್ನು ಸರಿಪಡಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಮತ್ತೆ ಮಾತಿನಚಕಮಕಿ ನಡೆಯಿತು. ಆಗ ಮಧ್ಯಪ್ರವೇಶಿಸಿದ ಸಭಾಪತಿ, ಸಚಿವರು ಸ್ಪಷ್ಟ ಭರವಸೆ ನೀಡಿದ್ದು ಧರಣಿಯಿಂದ ಹಿಂದೆ ಸರಿಯಿರಿ ಎಂದು ಸಲಹೆ ನೀಡಿದರು. ಬಳಿಕ ಪ್ರತಾಪಚಂದ್ರ ಶೆಟ್ಟಿ ಅವರು ತಮ್ಮ ಆಸನಕ್ಕೆ ಮರಳಿದರು.