ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಬಡಾಕರೆ ವ್ಯವಸಾಯ ಸೇವಾ ಸಹಕಾರಿ ಸಂಘದ ಮರವಂತೆ ಶಾಖೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಜ.7ರ ಶುಕ್ರವಾರ ಬೆಳಿಗ್ಗೆ 10-30ಕ್ಕೆ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ತಿಳಿಸಿದ್ದಾರೆ.
ಅವರು ಶುಕ್ರವಾರ ನಾವುಂದದಲ್ಲಿನ ಸಂಘದ ಪ್ರಧಾನ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸಂಘದ ಪ್ರಧಾನ ಕಛೇರಿ ಹಾಗೂ ಎಲ್ಲಾ ಶಾಖೆಗಳು ಸ್ವಂತ ನಿವೇಶನದಲ್ಲಿ ಕಟ್ಟಡ ಹೊಂದಿದೆ. ಮರವಂತೆ ಶಾಖೆಗೂ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ನೀಡುವ ಗುರಿ ಹೊಂದಲಾಗಿದೆ ಎಂದರು.
ಜ.7ರ ಬೆಳಿಗ್ಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಲಿದಾರೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಗೋದಾಮು ಉದ್ಘಾಟನೆ ಮಾಡಲಿದ್ದಾರೆ. ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಶುಭಶಂಸನೆಗೈಯಲಿದ್ದು, ಮರವಂತೆ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಂತರಾಷ್ಟ್ರೀಯ ಯೋಗಪಟ ಧನ್ವಿ ಮರವಂತೆಯಿಂದ ಯೋಗ ಹಾಗೂ ನೃತ್ಯ ಪ್ರದರ್ಶನ, ಖ್ಯಾತ ಗಾಯಕ ಗಣೇಶ್ ಗಂಗೊಳ್ಳಿ ತಂಡದಿಂದ ಸುಗಮ ಸಂಗೀತ, ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಕಂಸ ದಿಗ್ವಿಜಯ ಮತ್ತು ಕಂಸವಧೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಎಂ. ಚಂದ್ರಶೀಲ ಶೆಟ್ಟಿ, ಪ್ರಭಾರ ಸಿಇಓ ಸುರೇಶ್ ಅಳ್ವೆಗದ್ದೆ, ನಿರ್ದೇಶಕರಾದ ಎಂ. ವಿನಾಯಕ ರಾವ್, ವಾಸು ಪೂಜಾರಿ, ಭೋಜ ನಾಯ್ಕ್, ಜಗದೀಶ ಪಿ. ಪೂಜಾರಿ, ನರಸಿಂಹ ದೇವಾಡಿಗ, ರಾಮಕೃಷ್ಣ ಖಾರ್ವಿ, ಪ್ರಕಾಶ್ ದೇವಾಡಿಗ, ಎಂ. ಅಣ್ಣಪ್ಪ ಬಿಲ್ಲವ, ನಾರಾಯಣ ಶೆಟ್ಟಿ, ರಾಮ, ನಾಗಮ್ಮ, ಸರೋಜ ಆರ್. ಗಾಣಿಗ, ಉಪಸ್ಥಿತರಿದ್ದರು.