ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕರಾವಳಿ ಭಾಗದ ಜನರ ಭಾವನಾತ್ಮಕ ಬೆಸುಗೆ ಯಕ್ಷಗಾನವಾಗಿದ್ದು, ಪ್ರತಿಯೊಬ್ಬರ ಮನೆ-ಮನದಲ್ಲೂ ಇದು ಹಾಸು ಹೊಕ್ಕಾಗಿದೆ. ಯಕ್ಷಗಾನದ ಬಗ್ಗೆ ವಿಶೇಷ ಒಲವು ಹೊಂದಿದ್ದ ಡಾ|| ಶಿವರಾಮ ಕಾರಂತರು ದೇಶದಲ್ಲಿ ಅಲ್ಲದೇ ವಿದೇಶದಲ್ಲಿಯೂ ಯಕ್ಷಗಾನದ ಕಂಪನ್ನು ಪಸರಿಸಿದವರು. ಯಕ್ಷಗಾನಕ್ಕೆ ಕಾರಂತರ ಕೊಡುಗೆ ಅನನ್ಯವಾದುದು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಸಚಿವರ ಆಪ್ತ ಸಹಾಯಕರಾದ ಹರೀಶ್ ಕುಮಾರ್ ಶೆಟ್ಟಿ ಅವರು ಹೇಳಿದರು.
ಅವರು ಡಾ|| ಶಿವರಾಮ ಕಾರಂತ ಪ್ರತಿಷ್ಠಾನ (ರಿ)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಯಕ್ಷಸುಮನಸ ಹವ್ಯಾಸಿ ಕಲಾರಂಗ(ರಿ)ಕೋಟ ಇವರಿಂದ ಕೋಟದ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆದ ಮೈಂದ ದ್ವಿವಿದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಕಲಾವಿದ ರಾಮಚಂದ್ರ ಐತಾಳ್ ಗುಂಡ್ಮಿ ಅವರು ಮಾತನಾಡಿ ಯಕ್ಷಗಾನವು ಕೇವಲ ಮನೋರಂಜನೆಯ ವಸ್ತುವಲ್ಲ ಅದು ನಮಗೆ ಬದುಕಿನ ಪಾಠ ಕಲಿಸುವ ಒಂದು ಮಾನದಂಡ, ಪ್ರಸ್ತುತ ಕಾಲ ಘಟ್ಟದಲ್ಲಿ ಕೆಲವೊಂದು ಯಕ್ಷಗಾನ ಪ್ರಸಂಗಗಳು ಮನೋರಂಜನೆಯ ಉದ್ದೇಶದಿಂದ ಮಿತಿಮೀರಿ ಯಕ್ಷಗಾನ ಪ್ರಸಂಗದ ಮೌಲ್ಯ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ , ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಸದಸ್ಯ ಸುಬ್ರಾಯ್ ಆಚಾರ್ಯ, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಕ್ಷಸುಮನಸ ಹವ್ಯಾಸಿ ಕಲಾರಂಗದ ಸಂಚಾಲಕ ಪ್ರಸಾದ್ ಬಿಲ್ಲವ ನಿರೂಪಿಸಿದರು.















