ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜ.05: ನಾಲ್ಕು ಭಾರಿ ಕುಂದಾಪುರ ಕ್ಷೇತ್ರದಿಂದ ವಿಧಾನಸಭಾ ಸದಸ್ಯರಾಗಿ, ಮೂರು ಭಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಒಟ್ಟು 36 ವರ್ಷಗಳ ಸುಧೀರ್ಘ ಅವಧಿಗೆ ಶಾಸಕರಾಗಿದ್ದ ಕೆ. ಪ್ರತಾಪ್ಚಂದ್ರ ಶೆಟ್ಟಿ ಅವರು ಜ.5ರಂದು ಶಾಸಕತ್ವದಿಂದ ನಿವೃತ್ತಿ ಹೊಂದಲಿದ್ದಾರೆ.
ಕೊಳ್ಕೆಬೈಲಿನಲ್ಲಿ 1950 ಸೆ.4ರಂದು ಜನಿಸಿದ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಬಿ.ಎ ಪದವಿಯ ಬಳಿಕ ಬ್ಯಾಂಕ್ ಉದ್ಯೋಗಿಯಾಗಿದ್ದರು. ತಂದೆಯ ನಿಧನದ ನಂತರ ಉದ್ಯೋಗ ತೊರೆದು ಕೃಷಿಕಾಯಕದಲ್ಲಿ ನಿರತರಾದ ಅವರು ಮುಂದೆ, ಯೂತ್ ಕಾಂಗ್ರೆಸ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ 1983ರಲ್ಲಿ ರಾಜಕೀಯ ಪ್ರಯಾಣ ಆರಂಭಿಸಿದ್ದರು. ಮುಂದೆ ಕುಂದಾಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಉಪಾಧ್ಯಕ್ಷರಾಗಿ, ಎಐಸಿಸಿ ಸದಸ್ಯರಾಗಿ ಪಕ್ಷದ ವಿವಿಧ ಹುದ್ದೆಗಳನ್ನು ಅವರು ನಿಭಾಯಿಸಿದ್ದಾರೆ.
ಏಳು ಅವಧಿಗೆ ಶಾಸಕ:
1985, 1989 ಹಾಗೂ 1994ರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. 2004, 2010 ಹಾಗೂ 2016ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದರು. ಒಂದು ಬಾರಿ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಡಿ.12 ರಂದು ಸಭಾಪತಿಯಾಗಿ ಸ್ಥಳೀಯ 2018ರ ವಿಧಾನಪರಿಷತ್ ಆಯ್ಕೆಯಾಗಿದ್ದರು.
ನೇರ ಹಾಗೂ ನಿಷ್ಟುರ ನಿಲುವು ಹೊಂದಿದ್ದರೂ, ಅನಗತ್ಯ ಹೇಳಿಕೆ ಹಾಗೂ ವಿವಾದಗಳಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಓದು, ಅಧ್ಯಾತ್ಮ, ಯೋಗ, ಧ್ಯಾನ ಅವರ ಆಸಕ್ತಿಯ ಕ್ಷೇತ್ರಗಳು.
ಪ್ರತಾಪಚಂದ್ರ ಶೆಟ್ಟಿ ಅವರು ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹೋರಾಟ, ಸತ್ಯಾಗ್ರಹ, ಬಡವರ, ರೈತರ ಹಾಗೂ ಶೋಷಿತ ವರ್ಗಗಳ ಧ್ವನಿಯಾಗಿ ಗುರುತಿಸಿ ಕೊಂಡಿದ್ದರು. ತಮ್ಮ ಕೊನೆಯ (ಬೆಳಗಾವಿ) ಅಧಿವೇಶನದಲ್ಲಿ, ‘ ಡೀಮ್ಸ್ ಫಾರೆಸ್ಟ್ ಕುರಿತು ಅಹೋರಾತ್ರಿ ಧರಣಿಗೆ ಮುಂದಾಗುತ್ತೇನೆ’ ಎನ್ನುವ ಮೂಲಕ ಸದ್ದು ಮಾಡಿದ್ದರು. ಕರಾವಳಿಯಲ್ಲಿ ಮೂರ್ತೆದಾರರಿಗೆ ಸಾಮಾಜಿಕ ನ್ಯಾಯ ನೀಡಬೇಕು ಎಂಬ ಹೋರಾಟ, ಪೊಲೀಸ್ ಠಾಣೆಯಲ್ಲಿ ಮೃತ ಪಟ್ಟ ಕಾರ್ಮಿಕ ಅಣ್ಣು ಖಾರ್ವಿಗೆ ನ್ಯಾಯ ಒದಗಿಸುವುದು, ವಾರಾಹಿ ಯೋಜನೆ ಮತ್ತಿತರ ಹೋರಾಟಗಳಲ್ಲಿ ಮು೦ಚೂಣಿಯಲ್ಲಿದ್ದರು. ಪ್ರಸ್ತುತ ಉಡುಪಿ ಜಿಲ್ಲಾ ರೈತ ಸಂಘ ಹಾಗೂ ಹುಯ್ಯಾರು ಪಟೇಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿದ್ದಾರೆ. ಶಾಸಕತ್ವದ ನಿವೃತ್ತಿಯ ಬಳಿಕ ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸುತ್ತೇನೆ. ರೈತ ಪರ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವ ಚಿಂತನೆ ಇದೆ ಎಂದೂ ಅವರು ಹೇಳಿದ್ದಾರೆ.