ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಎನ್ ಸಿಸಿ ನೌಕಾದಳದ ವತಿಯಿಂದ ಈಜು, ಸೆಮಫೋರ್, ರಿಗ್ಗಿಂಗ್, ರಸಪ್ರಶ್ನೆಗಳನ್ನೊಳಗೊಂಡ ಸೀಮೆನ್ಶಿಪ್ (seamanship) ಸ್ಪರ್ಧೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ಸಂಯೋಜಕ ಹಾಗೂ ಎನ್‌ಸಿಸಿ ನೌಕಾದಳದ ಅಧಿಕಾರಿ ಸಬ್ ಲೆಫ್ಟಿನೆಂಟ್ ನಾಗರಾಜ್ ಎಂ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ನವೀನತೆ, ಕ್ರಿಯಾಶೀಲತೆ ಬೆಳೆಸುವುದು ಹಾಗೂ ದೇಶದ ನೌಕಾದಳದಲ್ಲಿ ಇರುವ ವಿಶೇಷತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಯಲು ಈ ಸ್ಪರ್ಧೆಯು ಸಹಕಾರಿಯಾಗುವುದು ಎಂದು ತಿಳಿಸಿದರು . ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ವಿವೇಕ್ ಆಳ್ವರವರು ಮಾತನಾಡುತ್ತಾ ವಿದ್ಯಾರ್ಥಿಗಳು ಹೊಸತನವನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಪುಸ್ತಕದ ಆಚೆಗಿನ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿದ್ದಲ್ಲಿ ಪೂರ್ಣರೂಪದ ಕಲಿಕೆ ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಎಲ್ಲಾ ಫೋರಂನ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ಅವರು ಮಾತನಾಡಿ, ಕಾಲೇಜಿನಲ್ಲಿ ಮೊದಲ ಬಾರಿ ಇಂತಹ ನವೀನ ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ತಮ್ಮ ಯೋಚನಾ ಲಹರಿ, ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರಿಣಾಕ್ಷಿ, ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಶ್ರೀಮತಿ ದಿವ್ಯಾ ರಾಜೇಶ್ ಹಾಗೂ ಕೆಡೆಟ್ ಪ್ರತಿನಿಧಿ, ಪೆಟ್ಟಿ ಆಫೀಸರ್ ವಿಘ್ನೇಶ್ ಉಪಸ್ಥಿತರಿದ್ದರು.