ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಂಗೀತ, ನಾಟಕ, ಸಾಹಿತ್ಯ ಇವೆಲ್ಲವೂ ನಮ್ಮಲ್ಲಿ ಆತ್ಮ ವಿಶ್ವಾಸವನ್ನು ಮೂಡಿಸಿದರೆ ಅದೇ ದೊಡ್ಡ ಯಶಸ್ಸು. ಸತೀಶ್ ಭಟ್ ಮಾಳಕೋಡ್ ಅದೃಷ್ಟವಶಾತ್ ಈ ಕರಾವಳಿ ಭಾಗದಲ್ಲಿ ನೆಲೆ ನಿಂತು ಅನೇಕ ಶಿಷ್ಯರನ್ನು ಹೊಂದಿರುವಂತದ್ದು ನಮಗೆಲ್ಲ ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.
ಯಶಸ್ವಿ ಕಲಾವೃಂದ ಕೊಮೆ-ತೆಕ್ಕಟ್ಟೆ ಇವರ ಆಶ್ರಯದಲ್ಲಿ ಗುರು ಪರಂಪರಾ ಸಂಗೀತ ಸಭಾ ಕುಂದಾಪುರ ಇವರ ಸಂಗೀತೋಪಾಸನ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜರುಗಿದ ಗುರುವಂದನಾ ಕಾರ‍್ಯಕ್ರಮದಲ್ಲಿ ಭಾರತೀಯ ಸಂಗೀತ ಗುರುಗಳನ್ನು ಅಭಿನಂದಿಸಿ ಮಾತನಾಡಿದರು.
ಅವರು ಇಂತಹ ಕರಾವಳಿ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಬೆಳೆಸುವಲ್ಲಿ, ಉಳಿಸುವಲ್ಲಿ, ಆಸಕ್ತಿ ಮೂಡಿಸುವಲ್ಲಿ ಸತೀಶ್ ಭಟ್ ಹಾಗೂ ಪ್ರತಿಮಾ ಭಟ್ ಸಾಕಷ್ಟು ಕೆಲಸ ಮಾಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಮನೆಮನೆಗೆ ಹೋಗಿ ಪಾಠ ಮಾಡುತ್ತ ಶಿಷ್ಯರ ಜೊತೆಗೆ ಸಲುಗೆ ಮೂಡಿಸಿಕೊಂಡು, ಪ್ರೀತಿಯಿಂದ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ ಮುಖೇನ ಹಿಂದೂಸ್ಥಾನಿ ಸಂಗೀತ ಬೆಳಿಸುವ ಕಾರ್ಯ ಸಮಾಜಕ್ಕೆ ಆರೋಗ್ಯಕರ ಬೆಳವಣಿಗೆ ಎಂದರು.
ಸಂಗೀತ ಗುರು ವಿದ್ವಾನ್ ಸತೀಶ್ ಭಟ್ ಮಾತನಾಡಿ ಭಾರತೀಯ ಸಂಗೀತಗಳು ಗುರುವಿನಂದಲೇ ಬರುವಂತಹ ವಿದ್ಯೆಗಳು. ಆದರೆ ಇತ್ತೀಚೆಗೆ ಎಲ್ಲಾ ರಂಗದಲ್ಲೂ ಗುರು ಶಿಷ್ಯರ ಸಂಬಂಧ ಕಳೆದು ಹೋಗುತ್ತಿದೆ. ಉದ್ದೇಶ, ಕಾರಣಗಳಿಗೆ ಎಲ್ಲರೂ ಕಾರಣರಾಗಿದ್ದಾರೆ. ಪ್ರಯತ್ನಕ್ಕೆ ವೇದಿಕೆ ಇದ್ದೇ ಇದೆ. ಆದರೆ ನನ್ನೆಲ್ಲಾ ವಿದ್ಯಾರ್ಥಿಗಳೂ ಗುರುವೇನು ಎಂಬುದನ್ನರಿತವರಾದ್ದರಿಂದ ನನಗೆ ಸಂಗೀತ ಸುಲಭವಾಗಿದೆ. ಕುಂದಾಪುರ ನನಗೆ ಅದ್ಭುತ ವೇದಿಕೆಯಾಗಿದೆ. ಪರಂಪರೆಯಿಂದೊಡಗೂಡಿದ ಇಂತಹ ಸಂಪ್ರದಾಯಗಳೂ ಈ ಭಾಗದಲ್ಲಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುರುಪರಂಪರಾ ಶಿಷ್ಯರು ಅಭಿನಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪಂಚಮಿ ವೈದ್ಯರ ಗುರುಗಳಾದ ಸತೀಶ್ ಭಟ್ ಮಾಳಕೋಡು, ಪ್ರತಿಮಾ ಭಟ್, ಶಾರದಾ ಹೊಳ್ಳ, ಹಾಗೂ ವೀಣಾ ನಾಯಕ್‌ರನ್ನು ಅಭಿನಂದಿಸಲಾಯಿತು.
ಪರಿಣಿತ ವೈದ್ಯ ಪ್ರಾರ್ಥಿಸಿದರು. ಪಂಚಮಿ ವೈದ್ಯ ಸ್ವಾಗತಿಸಿದರು. ಪೂಜಾ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಹರ್ಷಿತಾ ವಂದಿಸಿದರು. ಸಭಾ ಕಾರ‍್ಯಕ್ರಮದ ಬಳಿಕ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಶಿಷ್ಯ ಬಳಗದವರಿಂದ ಗಾನ ಯಾನ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು.