ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದೊಳಗೆ ಪ್ರವೇಶ ನಿರಾಕರಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಗೇಟಿನ ಬಳಿಯೇ ತಡೆದು, ಸರ್ಕಾರದ ಆದೇಶದಂತೆ ಕಾಲೇಜು ವಸ್ತ್ರಸಂಹೀತೆಯನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸಬೇಕು ಎಂದು ನಿನ್ನೆಯೇ ಪೋಷಕರ ಸಭೆಯಲ್ಲಿ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಆದೇಶ ಪಾಲಿಸುವುದಿದ್ದರೆ ಮಾತ್ರ ಕಾಲೇಜು ಆವರಣದೊಳಕ್ಕೆ ಬನ್ನಿ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಕಾಲೇಜಿನ ಆವರಣದ ಹೊರಗೆ ನಿಂತ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು, ನಾವು ಭಾರತದ ಪ್ರಜೆಗಳು, ನಮಗೂ ಕಲಿಕೆಗೆ ಅವಕಾಶ ಕೊಡಿ. ಕಾಲೇಜು ಶಿಕ್ಷಣ ಅಂತಿಮ ಹಂತದಲ್ಲಿರುವಾಗ ಇಂತಹ ಕಾನೂನು ತರುವುದು ಸರಿಯಲ್ಲ. ಮೊದಲೇ ಹೇಳಿದ್ದರೆ ನಾವು ಈ ಕಾಲೇಜಿಗೆ ಪ್ರವೇಶ ಪಡೆಯುತ್ತಿರಲಿಲ್ಲ. ಹಿಜಾಬ್ ಕಾರಣವಿಟ್ಟುಕೊಂಡು ನಮ್ಮ ಭವಿಷ್ಯ ಹಾಳುಮಾಡಬೇಡಿ ಎಂದು ಮನವಿ ಮಾಡುತ್ತಾ ಕಣ್ಣೀರು ಹಾಕಿದರು.
ಒಂದು ಹಂತದಲ್ಲಿ ಪ್ರಾಂಶುಪಾಲರು ಕಾಲೇಜು ಗೇಟು ಮುಚ್ಚಲು ಮುಂದಾದಾಗ ಆಕ್ರೋಶಗೊಂಡ ವಿದ್ಯಾರ್ಥಿನಿಯರು ನಾವು ಕೂಡ ಈ ಕಾಲೇಜಿನ ವಿದ್ಯಾರ್ಥಿಗಳು, ಗೇಟು ಮುಚ್ಚಿ ಹೊರಗೆ ನಿಲ್ಲಿಸಲು ನಾವೇನು ಪ್ರಾಣಿಗಳಲ್ಲ ಎಂದು ವಾದಿಸಿದರು. ಪ್ರಾಶುಂಪಾಲರು ಮಾತ್ರ ತಮ್ಮ ನಿಲುವು ಸಡಿಲಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:
► ಕುಂದಾಪುರ: ಪಿಯು ಕಾಲೇಜಿನಲ್ಲಿ ಹಿಜಾಬ್ ವಿರುದ್ಧ ಕೇಸರಿ ಶಾಲು ಅಸ್ತ್ರ! ಮುಗಿಯದ ವಿವಾದ – https://kundapraa.com/?p=57084 .