ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ,ಫೆ.4: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಕೆ-ಸ್ಟೆಪ್ಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ 9 ರಿಂದ 12 ನೇ ವರ್ಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಫೆಬ್ರವರಿ 9 ರಂದು ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವ ವಿದ್ಯಾರ್ಥಿಗೆ 5,000 ರೂ. ಹಾಗೂ ದ್ವಿತೀಯ ಬಹುಮಾನ ಪಡೆಯುವ ವಿದ್ಯಾರ್ಥಿಗೆ 3,000 ರೂ. ನಗದು ಹಾಗೂ ಅಭಿನಂದನಾ ಪತ್ರ ನೀಡಲಾಗುವುದು.
ಜಿಲ್ಲಾ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗುವ 4 ಯುವ ವಿಜ್ಞಾನಿಗಳಿಗೆ ತಲಾ 10,000 ರೂ. ನಗದು ಬಹುಮಾನ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ಪತ್ರ ನೀಡಲಾಗುವುದು.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸ್ಪರ್ಧೆಯ ರಾಜ್ಯ ಸಂಯೋಜಕಿ ಮೀನಾಕ್ಷಿ ಶಿವಾನಂದ ಕುಡಸೋಮಣ್ಣವರ ಮೊ.ನಂ: 7353960666, ಕ.ರಾ.ವಿ.ಪ ಕಚೇರಿ ಮೊ.ನಂ: 9008442557, 9483549159 ಅಥವಾ 9449530245 ಅನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.