ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.12: ಉಡುಪಿ ಕೇಂದ್ರೀಕೃತವಾಗಿ ರಾಜ್ಯ ವ್ಯಾಪ್ತಿಯಲ್ಲಿ ಅಶಾಂತಿ ಮೂಡಿಸಲು ಕಾರಣವಾಗಿರುವ ಹಿಜಾಬ್-ಕೇಸರು ಶಾಲು ವಿವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ (ಪಥ ಸಂಚಲನ) ನಡೆಸಿದ್ದು, ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿಯೂ ಶುಕ್ರವಾರ ಸಂಜೆ ನಡೆಯಿತು.
ಶಾಸ್ತ್ರೀ ವೃತ್ತದಿಂದ ಆರಂಭಗೊಂಡ ಪಥಸಂಚಲನ ಹೊಸ ಬಸ್ ನಿಲ್ದಾಣದ ಮೂಲಕವಾಗಿ ನಗರದಲ್ಲಿ ಸಂಚರಿಸಿ ಮತ್ತೆ ಪುನಃ ಶಾಸ್ತ್ರೀ ವೃತ್ತಕ್ಕೆ ಆಗಮಿಸಿ ಸಮಾಪ್ತಿಗೊಂಡಿತು.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ವೃತ್ತ ನಿರೀಕ್ಷಕ ಗೋಪಿಕೃಷ್ಣ ನೇತೃತ್ವದಲ್ಲಿ ಕುಂದಾಪುರ ಪಿಎಸ್ಐ ಸದಾಶಿವ ಗವರೋಜಿ, ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್, ಟ್ರಾಫಿಕ್ ಠಾಣೆ ಪಿಎಸ್ಐ ಸುಧಾಪ್ರಭು, ಶಂಕರನಾರಾಯಣ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್, ಅಮಾಸೆಬೈಲು ಪಿಎಸ್ಐ ಸುಬ್ಬಣ್ಣ ಸೇರಿದಂತೆ ಪೊಲೀಸ್ ಸಹಾಯಕ ಉಪನಿರೀಕ್ಷಕರುಗಳು, ಸಿಬ್ಬಂದಿಗಳು ಇದ್ದರು. ಕೆ.ಎಸ್.ಆರ್.ಪಿ ಮಹಿಳಾ ವಿಭಾಗದ ಪೊಲೀಸರು, 2 ಡಿಎಆರ್ ತುಕಡಿಯ ಪೊಲೀಸರು ಪಥಸಂಚಲನದಲ್ಲಿ ಇದ್ದರು.