ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಶ್ರೀರಾಮ್ ಕ್ರಿಕೆಟರ್ಸ್ ಕೇವಲ ಕ್ರಿಕೆಟ್ ಆಡುವುದಕ್ಕೋಸ್ಕರ ಹುಟ್ಟಿದ ಸಂಸ್ಥೆಯಲ್ಲ. ಕೆಲ ಸಮಾಜಮುಖಿ ಕಾರ್ಯದ ಜೊತೆಗೆ ಈ ಭಾಗದ ಏಳಿಗೆಗಾಗಿ ಶ್ರಮಿಸುತ್ತಿದೆ. ಒಂದಿಲ್ಲೊಂದು ಹೊಸತನವನ್ನು ಮಾಡುತ್ತಾ ಬಂದಿರುವ ಈ ಸಂಸ್ಥೆ ಸಾಧಕರನ್ನು ಅದರಲ್ಲೂ ಮುಖ್ಯವಾಗಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವವರನ್ನು ಸಮ್ಮಾನಿಸುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ ಗೋಪಾಲ ಪೂಜಾರಿ ಹೇಳಿದರು.
ಅವರು ಹೆಮ್ಮಾಡಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀರಾಮ್ ಕ್ರಿಕೆಟರ್ಸ್ ಆಶ್ರಯದಲ್ಲಿ ಜರುಗಿದ 3ನೇ ಬಾರಿಗೆ ಎರಡು ದಿನಗಳ 30 ಗಜಗಳ ಸಂಪತ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ರಂಗದಲ್ಲೂ ಮೀಸಲಾತಿಯಿದೆ. ಆದರೆ ಕ್ರಿಕೆಟ್ ಅಥವಾ ಕ್ರೀಡೆಯಲ್ಲಿ ಮಾತ್ರ ಮೀಸಲಾತಿ ಇಲ್ಲದೆಯೂ ಸಾಧನೆಯ ಮೂಲಕವೇ ಉನ್ನತ ಮಟ್ಟಕ್ಕೇರಬಹುದು. ಸಂಪತ್ ಅವರ ಸ್ಮರಣಾರ್ಥ ಆಯೋಜಿಸುತ್ತಿರುವ ಈ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಸ್ವಚ್ಛತಾ ವಾರಿಯರ್ಸ್ ಗಳಾಗಿರುವ ಸತೀಶ್ ವಂಡ್ಸೆ, ಮಂಜುನಾಥ ವಂಡ್ಸೆ ಹಾಗೂ ರಾಮ ವಂಡ್ಸೆ, ಹೆಮ್ಮಾಡಿಯ ಲೈನ್ಮನ್ ಮಂಜುನಾಥ ಪೂಜಾರಿ, ಶ್ರೀರಾಮ್ ಕ್ರಿಕೆಟರ್ಸ್ನ ಐಕಾನ್ ಆಟಗಾರ ಜಗ ಹೆಮ್ಮಾಡಿ ಅವರನ್ನು ಸಮ್ಮಾನಿಸಲಾಯಿತು.
ಇದೇ ವೇಳೆ ಅನಾರೋಗ್ಯದಿಂದ ಬಳಲುತ್ತಿರುವವರ ಚಿಕಿತ್ಸೆಗೆ ನೆರವಾಗುವ ಸಲುವಾಗಿ ಶ್ರೀರಾಮ ಕ್ರಿಕೆಟರ್ಸ್ ಪರವಾಗಿ ದಿ. ಸಂಪತ್ ಹೆಸರಿನಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಕುಂದಾಪುರದ ಎಪಿಎಂಸಿ ಸದಸ್ಯ ಶರತ್ ಕುಮಾರ್ ಶೆಟ್ಟಿ ಟ್ರೋಫಿ ಅನಾವರಣಗೊಳಿಸಿದರು. ಹೆಮ್ಮಾಡಿ ಗ್ರಾ.ಪಂ. ಅಧ್ಯಕ್ಷ ಯು. ಸತ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾ.ಪಂ. ಸದಸ್ಯ ರಾಘವೇಂದ್ರ ಪೂಜಾರಿ, ಡೈರಿ ಸರ್ಕಲ್ ಫ್ರೆಂಡ್ಸ್ ಅಧ್ಯಕ್ಷ ಶಂಕರ್ ಪಿ.ಎಚ್., ಕಿಶನ್ ಆಚಾರ್ಯ ಹೆಮ್ಮಾಡಿ, ಜನಾರ್ದನ ಪೂಜಾರಿ, ನಿತೇಶ್ ಪೂಜಾರಿ, ಶ್ರೀ ರಾಮ್ ಕ್ರಿಕೆಟರ್ಸ್ ನ ಮಾಲಕ ಕೃಷ್ಣಮೂರ್ತಿ ರಾವ್, ಅಧ್ಯಕ್ಷ ಸುರೇಶ್ ಪೂಜಾರಿ, ನಾಗೇಂದ್ರ ಹೆಮ್ಮಾಡಿ, ಜಗನ್ನಾಥ್, ವಿನಯ್, ಶಶಿಕಾಂತ, ಸುಕುಮಾರ್, ಸಂದೀಪ, ಆಯುಷ್, ಪೃಥ್ವಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಪ್ರಸ್ತಾವಿಸಿ, ಸ್ವಾಗತಿಸಿದರು. ವಸಂತ ಹೆಮ್ಮಾಡಿ ಕಾರ್ಯಕ್ರಮ ನಿರೂಪಿಸಿದರು.