ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಛತ್ರಪತಿ ಶಿವಾಜಿ ಬಸ್ರೂರಿಗೆ ಮಾತ್ರ ಸ್ವಾತಂತ್ರ್ಯ ದೊರಕಿಸಿಕೊಟ್ಟಿಲ್ಲ. ಪೋರ್ಚುಗೀಸರು ತೊಲಗಲು ಅಡಿಗಲ್ಲು ಹಾಕಿದ್ದರು. ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾಪುರುಷ ಶಿವಾಜಿ ನೆನಪಿನಲ್ಲಿ ಬಸ್ರೂರಲ್ಲಿ ಕಳೆದ 9 ವರ್ಷಗಳಿಂದ ಕಾರ‍್ಯಕ್ರಮ ನಡೆಯುತ್ತಿರುವುದು ಗಮನಾರ್ಹ ವಿಷಯ. ಇತಿಹಾಸದಲ್ಲಿ ಬಸ್ರೂರಿಗೆ ಹೆಚ್ಚು ಪ್ರಾಮುಖ್ಯತೆಯಿದೆ ಎಂದು ಭಾರತೀಯ ಸಂತಸಭಾದ ಸಂಘಟನಾ ಪ್ರಧಾನ ಕಾರ‍್ಯದರ್ಶಿ ಡಾ. ಸಂದೀಪ್ ರಾಜ್ ಮಹದೇವ ರಾವ್ ಮಹಿಂದ್ ಪುಣೆ ಹೇಳಿದರು.
ಛತ್ರಪತಿ ಶಿವಾಜಿ 1665ರ ಫೆ. 13 ಪೋರ್ಚುಗೀಸರ ವಿರುದ್ಧ ಪ್ರಥಮ ನೌಕಾಯಾನ ಕೈಗೊಂಡು, ಬಸ್ರೂರಲ್ಲಿ ವಿಜಯ ಪತಾಕೆ ಹಾರಿಸಿದ ದಿನವಾಗಿದ್ದು, ಬಸ್ರೂರು ಛತ್ರಪತಿ ಶಿವಾಜಿ ಅಭಿಮಾನಿ ಬಳಗ ಆಶ್ರಯದಲ್ಲಿ ಶ್ರೀ ದೇವಿ ದೇವಸ್ಥಾನದ ವಠಾರದಲ್ಲಿ ಭಾನುವಾರ ಅದರ ಸವಿನೆನಪಿಗಾಗಿ ಬಸ್ರೂರು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
ಭಾರತೀಯ ಇತಿಹಾಸ ಸಂಕಲನ ಸಮಿತಿ ಮಹಿಳಾ ಪ್ರಮುಖ್ ಡಾ. ಸೀಮಾ ಉಪಾಧ್ಯಾಯ,ಶಿವಾಜಿ ಕೇವಲ ಮಹಾರಾಷ್ಟ್ರಕ್ಕೆ ಸೀಮಿತರಲ್ಲ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದರು.
ದುರ್ಗಾವಾಹಿನಿಯ ಚೈತ್ರ ಕುಂದಾಪುರ ಮಾತನಾಡಿ ಶಿವಾಜಿ ಮರಾಠರೆಂದು ಹೇಳುತ್ತಿದ್ದು ಅವರ ಮೂಲ ಕನ್ನಡ ನೆಲವಾಗಿದ್ದು ಅವರು ಹಿಂದೂ ಸಾಮ್ರಾಟ. ಶಾಲು ಹಾಕೋದೆ ಹೋರಾಟ ಎಂದುಕೊಂಡ ಸೋ ಕಾಲ್ಡ್ ಹೋರಾಟಗಾರರು, ಕೆಲ ರಾಜಕಾರಣಿಗಳು, ಪುಢಾರಿಗಳು ಇತಿಹಾಸ ತಿರುಚುತ್ತಾರೆ. ಶಿವಾಜಿ ಸ್ತ್ರೀಯರ ರಕ್ಷಣೆ, ಗೋ ರಕ್ಷಣೆ ಮಾಡಿದವರು. ಅವರ ಪೂರ್ವಜರು ಕರ್ನಾಟಕದಲ್ಲಿ ನೆಲೆಸಿದ್ದವರು. ಅವರನ್ನು ಮರಾಠರು ಎಂದು ಬಿಂಬಿಸುತ್ತಿರುವುದು ಮೂರ್ಖತನ ಎಂದರು.
ಬಸ್ರೂರು ಮಂಡಿಕೇರಿ ಹೊಳೆಬಾಗಿಲಿನಿಂದ ಶ್ರೀ ದೇವಿ ದೇವಸ್ಥಾನದವರೆಗೆ ಸಾಂಪ್ರದಾಯಿಕ ಶೋಭಾಯಾತ್ರೆ ನಡೆಯಿತು. ಕಾರ‍್ಯಕ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಭಜರಂಗ ದಳ ತಾಲೂಕು ಸಂಚಾಲಕ ಸುಧೀರ್ ಮೇರ್ಡಿ ಇದ್ದರು. ಉಮೇಶ್ ಆಚಾರ್ಯ ಬಸ್ರೂರು ಸ್ವಾಗತಿಸಿ, ಸಾರಿಕಾ ಕಾರ‍್ಯಕ್ರಮ ನಿರೂಪಿಸಿದುರ. ರಾಕೇಶ್ ಜಿ. ಕೆಳಮನೆ ವಂದಿಸಿದರು.