ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಂದು ಶತಮಾನದಿಂದ ಊರಿನ ಮಕ್ಕಳಿಗೆ ವಿದ್ಯಾದಾನ ಮಾಡುತ್ತ ಬಂದಿದೆ. ಅಭಿವೃದ್ಧಿ ಸಮಿತಿ, ಹಳೆವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಮನ್ವಯದ ದುಡಿಮೆಯಿಂದ ಈಚಿನ ದಿನಗಳಲ್ಲಿ ವಿದ್ಯಾರ್ಥಿ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ನೆರೆಯೂರುಗಳ ಮಕ್ಕಳನ್ನೂ ಆಕರ್ಷಿಸುವಂತಾಗಲಿ. ಶಾಲೆಯ ಎಲ್ಲ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿಹೇಳಿದರು.
ಶಾಲೆಯಲ್ಲಿ ರೂ ೧೨ ಲಕ್ಷ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ತರಗತಿ ಕೊಠಡಿ ನಿರ್ಮಾಣ ಕಾಮಗಾರಿಗೆ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ ಸ್ವಾಗತಿಸಿದರು. ಶಾಲೆಯ ಹಿರಿಯ ಹಳೆವಿದ್ಯಾರ್ಥಿ ಎಸ್. ಜನಾರ್ದನ ಮರವಂತೆ ಶಾಲೆಯ ತಕ್ಷಣದ ಅಗತ್ಯಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ ಮಾಡಿದರು. ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಿತಾ ಆರ್. ಕೆ ವಂದಿಸಿದರು. ಅರ್ಚಕ ಪರಮೇಶ್ವರ ಅಡಿಗ ಭೂಮಿಪೂಜೆ ನೆರವೇರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಎಂ. ಮುಂದಿನಮನಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ, ಎಂಜಿನಿಯರ್ ರವೀಂದ್ರಮೂರ್ತಿ, ಗುತ್ತಿಗೆದಾರ ಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ ಆಚಾರ್, ಕಿಶನ್ ಪೂಜಾರಿ, ಸಾಧನಾ ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್, ಸ್ಥಳೀಯರಾದ ಪ್ರಭಾಕರ ಖಾರ್ವಿ, ಪಿ. ಸಂಜೀವ ಖಾರ್ವಿ, ವಿಶ್ವನಾಥ ಶ್ಯಾನುಭಾಗ್, ಸಹ ಶಿಕ್ಷಕ ಸೀತಾರಾಮ ಬಿ, ಅಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.










