ಬೈಂದೂರು: ಸ್ಕೌಟ್ಸ್ ಮತ್ತು ಗೈಡ್ಸ್‌ನಂತಹ ಸೇವಾ ಸಂಸ್ಥೆಗಳೊಂದಿಗೆ ವಿದ್ಯಾರ್ಥಿಗಳು ಹೆಚ್ಚು ತೊಡಗಿಸಿಕೊಳ್ಳುವ ಮೂಲಕ ದೇಶ ಕಟ್ಟುವ ಕೆಲಸವನ್ನು ಮಾಡಬೇಕಿದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಉಡುಪಿ ಜಿಲ್ಲಾ ಸಂಸ್ಥೆ ಹಾಗೂ ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಎರಡು ದಿನಗಳ ರೋವರ್ ರೇಂಜರ್ ಚಾರಣ ಶಿಬಿರ ಹಾಗೂ ವಹಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಉಜ್ವಲ ಭವಿಷ್ಯವನ್ನು ಪಡೆದು ಉತ್ತಮ ನಾಗರೀಕರಾಗಿ ಬದುಕಬೇಕಾದರೇ ವಿದ್ಯಾರ್ಥಿ ದೆಸೆಯಿಂದಲೇ ಸೇವಾ ಮನೋಭಾವವನ್ನು ಮೈಗೂಡಿಕೊಳ್ಳಬೇಕಿದೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಮಾಜವನ್ನೂ ಉತ್ತಮ ಮಾರ್ಗದಲ್ಲಿ ಕೊಂಡೊಯ್ಯಬೇಕಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ. ಎ. ಮೇಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಭಾರತ್ ಸೌಟ್ಸ್ ಮತ್ತು ಗೌಡ್ಸ್‌ನ ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಶಾಂತ ವಿ. ಎಸ್. ಆಚಾರ್ಯ, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಸ್ಕೌಟ್ಸ್ ಮತ್ತು ಗೈಡ್ಸ್ ರೋವರ್ ವಿಭಾಗದ ದಯಾನಂದ ಶೆಟ್ಟಿ, ಜಿಲ್ಲಾ ತರಬೇತಿ ಆಯುಕ್ತ ಕೊಗ್ಗ ಗಾಣಿಗ, ಬೈಂದೂರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಮಂಜುನಾಥ ಹೆಗ್ಡೆ, ರೋವರ್-ರೇಂಜರ್ ಅಧಿಕಾರಿ ನಾಗೇಶ್ ಉಪಸ್ಥಿತರಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಶೇಖರ ಪೂಜಾರಿ ಸ್ವಾಗತಿಸಿದರು. ಸ್ಥಾನೀಯ ಆಯುಕ್ತ ಬಿ. ಆನಂದ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋವರ್ ರೇಂಜರ್ ಪ್ರಮುಖ ಗುರುರಾಜ ವಂದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಪಾಂಡುರಂಗ ಕಾರ್ಯಕ್ರಮ ನಿರೂಪಿಸಿದರು.






















