ತಗ್ಗರ್ಸೆ ಶಾಲೆಯ ಸ್ಮಾರ್ಟ್ ಕ್ಲಾಸ್, ಪೀಠೋಪಕರಣ ಉದ್ಘಾಟನೆ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೀವನದಲ್ಲಿ ಕನಸು ಕಂಡರಷ್ಟೇ ಸಾಲದು. ಅದನ್ನು ನನಸಾಗಿಸಿಕೊಳ್ಳುವ ತನಕ ಛಲ ಹಾಗೂ ಗುರಿ ಮುಟ್ಟುವ ಭರವಸೆ ಇರಬೇಕು. ಶ್ರದ್ಧೆಯಿಂದ ನಾವು ಯಾವುದೇ ಕಾರ್ಯ ಮಾಡಿದರೂ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟೀ, ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.
ಶುಕ್ರವಾರ ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅವರು ಕೊಡುಗೆಯಾಗಿ ನೀಡಿದ ಸ್ಮಾರ್ಟ್ ಕ್ಲಾಸ್ ಹಾಗೂ ಪೀಠೋಪಕರಣಗಳನ್ನು ಉದ್ಘಾಟಿಸಿ ಮಾತನಾಡಿದರು. ನಾವು ಉದ್ಯೋಗ ವ್ಯವಹಾರಕ್ಕಾಗಿ ಯಾವುದೇ ಊರಿನಲ್ಲಿದ್ದರೂ ಹುಟ್ಟೂರಿನ ನೆನಪು ಬಿಡಬಾರದು. ಈ ನಿಟ್ಟಿನಲ್ಲಿ ಬೈಂದೂರು ತಾಲೂಕಿನಲ್ಲಿ ಟ್ರಸ್ಟ್ ಮೂಲಕ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಈ ಭಾಗದಲ್ಲಿ ಉದ್ಯಮ ಸ್ಥಾಪಿಸಿ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ನನ್ನ ಕನಸಾಗಿದ್ದು ಅದಕ್ಕಾಗಿ ಶ್ರಮಿಸಲಾಗುತ್ತಿದೆ. ಉಚಿತ ಮನೆ ನಿರ್ಮಾಣ, ಯುವಕರಿಗೆ ಸೈನ್ಯದ ತರಬೇತಿ ಮೊದಲಾದ ಕಾರ್ಯಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ಖುಷಿಯಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಗ್ಗರ್ಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರರಾದ ಟಿ. ನಾರಾಯಣ ಹೆಗ್ಡೆ ಮಾತನಾಡಿ ಖಾಸಗಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ನಡುವೆ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಹಾಗೂ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವುದು ಸವಾಲಿನ ಕೆಲಸವಾಗಿದೆ. ಉತ್ತಮ ಶಿಕ್ಷಕವೃಂದವಿರುವ ತಗ್ಗರ್ಸೆ ಶಾಲೆಯಲ್ಲಿ ಹಳೆ ವಿದ್ಯರ್ಥಿಗಳು ಹಾಗೂ ದಾನಿಗಳ ನೆರವಿನಿಂದ ಇನ್ನಷ್ಟು ಕಾರ್ಯಗಳು ಆಗಬೇಕಿದೆ ಎಂದರು.
ಶಾಲೆಗೆ ಒಟ್ಟು ರೂ.1,50,000 ಮೌಲ್ಯದ ಸ್ಮಾರ್ಟ್ ಕ್ಲಾಸ್, ಕಲಿಕಾ ಕುರ್ಚಿಗಳು ಹಾಗೂ ಡೆಸ್ಕ್ ಬೆಂಚ್ ಕೊಡುಗೆಯಾಗಿ ಕೊಡುಗೆಯಾಗಿ ನೀಡಿದ ಡಾ. ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕ ಚಂದ್ರ ದೇವಾಡಿಗ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಪೂಜಾರಿ, ಬೈಂದೂರು ಸಿಆರ್‌ಪಿ ಸಿ. ಎನ್. ಬಿಲ್ಲವ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಪ್ರಭಾಕರ ಗಾಣಿಗ, ಉಪಾಧ್ಯಕ್ಷರಾದ ಸುಮತಿ ಮೊಗವೀರ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಸಂತ ಮೊಗವೀರ, ಕಾರ್ಯದರ್ಶಿ ಮಂಜುನಾಥ ಪೂಜಾರಿ ತಗ್ಗರ್ಸೆ, ಹಿರಿಯ ಶಿಕ್ಷಕಿ ಅಂಬಾಬಾಯಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಧ್ಯಾಯಿನಿ ಜ್ಯೋತಿ ಹೆಚ್., ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಶಿಕ್ಷಕಿಯರಾದ ಮಾಲತಿ ಸ್ವಾಗತಿಸಿ, ಸಂಗೀತಾ ವಂದಿಸಿದರು. ಸಹಶಿಕ್ಷಕಿ ಸಾರಿಕಾ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ನಾಗರತ್ನ, ಅಕ್ಷತಾ ಸಹಕರಿಸಿದರು.