ನೊಂದವರು, ದೀನ ದಲಿತರ ಸೇವೆಯೇ ನಿಜವಾದ ಭಗತಂತನ ಆರಾಧನೆ – ಮಂತ್ರಾಲಯ ಶ್ರೀ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ,ಫೆ.26: ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ದೀನ ದಲಿತರಿಗೆ ಸಹಕಾರ ನೀಡುವುದೇ ನಿಜವಾದ ಭಗವಂತನ ಆರಾಧನೆಯಾಗಿದ್ದು, ಇದರಿಂದಾಗಿ ದೇವರು ಸಂತೃಪ್ತಿಯನ್ನು ಹೊಂದುತ್ತಾನೆ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾ?ಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಅವರು ಕೋಟ ಮೂಡುಗಿಳಿಯಾರಿನ ಜನಸೇವಾ ಟ್ರಸ್ಟ್ ವತಿಯಿಂದ ಮೂಡುಗಿಳಿಯಾರಿನ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ನಡೆದ ಅಭಿಮತ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀವರ್ಚನ ನೀಡಿ ಮಾತನಾಡಿ ಭಕ್ತಿ ಹಾಗೂ ಸೇವೆಯಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ. ಜನಸೇವಾ ಟ್ರಸ್ಟ್ ಕೈಗೊಳ್ಳುತ್ತಿರುವ ಭಕ್ತಿಪೂರ್ವಕ ಸಾಮಾಜಿಕ ಸೇವೆ ಎಲ್ಲರಿಗೂ ಮಾದರಿಯಾದದ್ದು ಎಂದರು.
ಈ ಸಂದರ್ಭ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಉಡುಪಿ ಮಾನವ ಹಕ್ಕುಗಳ ಪ್ರತಿಷ್ಟಾನದ ಸಂಚಾಲಕ ಡಾ| ರವೀಂದ್ರನಾಥ ಶಾನುಭಾಗ್ ಅವರಿಗೆ ಕೀರ್ತಿ ಕಲಶ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ರವೀಂದ್ರನಾಥ ಶ್ಯಾನುಭಾಗ್ ಅವರು, ನಾನು ಇದುವರೆಗೆ ಯಾವುದೇ ಪ್ರಶಸ್ತಿ ಪುರಸ್ಕಾರವನ್ನು ಪಡೆದವನಲ್ಲ; ಆದರೆ ಸಂಘಟಕರ ಮೇಲಿನ ಪ್ರೀತಿಯಿಂದ ಈ ಗೌರವಕ್ಕೆ ಒಪ್ಪಿದ್ದೇನೆ. ಜನರಿಂದ ಒಂದೇ ಒಂದು ರೂ ಹಣವನ್ನು ಪಡೆಯದೆ 38 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಹೋರಾಟ ನಡೆಸಿದ್ದು, ನೊಂದವರಿಗೆ ನ್ಯಾಯಕೊಡಿಸುವುದೇ ನನಗೆ ನಿಜವಾದ ಆತ್ಮತೃಪ್ತಿ ಹಾಗೂ ಗೌರವ ಎಂದರು.
ಈ ಸಂದರ್ಭ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಡಾ| ನಾಗೇಶ್, ಪತ್ರಿಕೋದ್ಯಮ ಕ್ಷೇತ್ರದ ಸಾಧಕ ಸತೀಶ್ ಬಿಲ್ಲಾಡಿ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ತೆಕ್ಕಟ್ಟೆ ಫ್ರೆಂಡ್ಸ್ ಅವರಿಗೆ ಯಶೋಗಾಥೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪ್ಲಾಡಿ ತೆಂಕುಬೆಟ್ಟಿನ ಬಡಕುಟುಂಬವೊಂದಕ್ಕೆ ಜನಸೇವಾ ಟ್ರಸ್ಟ್ ವತಿಯಿಂದ ಮನೆ ನಿರ್ಮಿಸಲಾಗಿದ್ದು ಇದರ ಕೀಲಿ ಕೈ ಹಸ್ತಾಂತರ ನಡೆಯಿತು. ಆಸಕ್ತರಿಗೆ ಸಹಾಯಧನ ವಿತರಣೆ, ಮನೆ ನಿರ್ಮಾಣಕ್ಕೆ ಸಹಕಾರ ನಡೆಯಿತು.
ಶಿವಮೊಗ್ಗದಲ್ಲಿ ದುಷ್ಕರ್ಮಿಗಳಿಂದ ಹತನಾದ ಹರ್ಷ ಕುಟುಂಬಕ್ಕೆ ಶ್ರೀಮಂತ್ರಾಲಯ ಮಠದಿಂದ ಐವತ್ತು ಸಾವಿರ ರೂ ಸಹಾಯಧನ ನೀಡುವುದಾಗಿ ಶ್ರೀಗಳು ಕಾರ್ಯಕ್ರಮದಲ್ಲಿ ಘೋಷಿಸಿದರು ಹಾಗೂ ಜನಸೇವಾ ಟ್ರಸ್ಟ್ ವತಿಯಿಂದ ಇನ್ನೊಂದು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು 2ಲಕ್ಷ ರೂ ನೆರವು ನೀಡುವುದಾಗಿ ಘೋಷಿಸಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಗುರ್ಮೆ ಟ್ರಸ್ಟ್ನ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೈಂದೂರು ಶಾಸಕ ಬಿ.ಎಂ, ಸುಕುಮಾರ್ ಶೆಟ್ಟಿ, ಮುಂಬ ಶೋಭಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತ್ನಾಕರ ಜಿ. ಶೆಟ್ಟಿ, ಉದ್ಯಮಿಗಳಾದ ಕೃಷ್ಣಮೂರ್ತಿ ಮಂಜ, ಪಂಜುರ್ಲಿ ಗ್ರೂಪ್ ರಾಜೇಂದ್ರ ಶೆಟ್ಟಿ, ಉದ್ಯಮಿ ಬಡಾಮನೆ ರತ್ನಾಕರ ಶೆಟ್ಟಿ, ಫಾರ್ಚೂನ್ ಗ್ರೂಪ್ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಉಳ್ತೂರು ಮೋಹನದಾಸ್ ಶೆಟ್ಟಿ, ಮುಂಬ ಬಿಲ್ಲವ ಸಂಘದ ಅಧ್ಯಕ್ಷ ಎನ್.ಟಿ ಪೂಜಾರಿ, ಎಸ್.ಎನ್.ಸಿ.ಯ ಪ್ರಶಾಂತ್ ಶೆಟ್ಟಿ, ಪೂನಾ ಬಂಟರಭವನದ ಅಧ್ಯಕ್ಷ ಇನ್ನಾ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.
ಅಭಿಮತ ಸಂಭ್ರಮದ ಪ್ರಮುಖರಾದ ಉಳ್ತೂರು ಅರುಣ್ ಶೆಟ್ಟಿ ಸ್ವಾಗತಿಸಿ, ಟೀಂ ಅಭಿಮತದ ಸಂಚಾಲಕ ವಸಂತ್ ಗಿಳಿಯಾರ್ ಪ್ರಾಸ್ತಾವಿಕ ಮಾತನಾಡಿದರು, ವಿದ್ಚಾನ್ ಆರ್. ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಪತ್ರಕರ್ತ ಕೆ. ಸಿ. ರಾಜೇಶ್ ವಂದಿಸಿದರು.