ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಒಡಿಶಾದ ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯಲ್ಲಿ, ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ ಸಹಭಾಗಿತ್ವದಲ್ಲಿ ಫೆ. 21ರಿಂದ 24ರವರೆಗೆ ನಡೆದ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಹಿಳಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಂಗಳೂರು ವಿವಿಯ ಮಹಿಳಾ ತಂಡವು ರಾಷ್ಟ್ರೀಯ ಮಟ್ಟದಲ್ಲಿ ಸತತ 5ನೇ ಬಾರಿಗೆ ಚಾಂಪಿಯನ್‍ಶಿಪ್ ಪಟ್ಟ ಮುಡಿಗೇರಿಸಿಕೊಂಡಿದೆ.
ಕ್ರೀಡಾಕೂಟದಲ್ಲಿ 51 ಅಂಕ ಪಡೆದ ಮಂಗಳೂರು ವಿವಿ ಅಗ್ರಸ್ಥಾನ ಪಡೆದಿದ್ದು, ಒಟ್ಟು 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕ ಸೇರಿದಂತೆ ಒಟ್ಟು 7 ಪದಕ ಪಡೆದ ಸಾಧನೆ ಮಾಡಿದೆ. ಪದಕ ವಿಜೇತ ಕ್ರೀಡಾರ್ಥಿಗಳೆಲ್ಲರೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಎಂಬುದು ಇಲ್ಲಿ ಉಲ್ಲೇಖಾರ್ಹ.
ಜಾವೆಲಿನ್ ಥ್ರೋನಲ್ಲಿ ಕರಿಷ್ಮಾ ಸನಿಲ್ (ಪ್ರಥಮ), ಹಾಫ್ ಮ್ಯಾರಥಾನ್‍ನಲ್ಲಿ ಕೆ. ಎಂ ಲಕ್ಷ್ಮೀ (ಪ್ರಥಮ), 10,000ಮೀ ಓಟದಲ್ಲಿ ಕೆ. ಎಂ ಲಕ್ಷ್ಮೀ (ತೃತೀಯ), ಶಾಟ್‍ಪುಟ್‍ನಲ್ಲಿ ರೇಖಾ (ತೃತೀಯ), ಲಾಂಗ್ ಜಂಪ್‍ನಲ್ಲಿ ಶೃತಿಲಕ್ಷ್ಮೀ (ದ್ವಿತೀಯ), ಶಾಲಿನಿ ಚೌದರಿ (ತೃತೀಯ) ಸ್ಥಾನ ಪಡೆದಿದ್ದಾರೆ. 4*100 ರಿಲೇ ವಿಭಾಗದಲ್ಲಿ ಆಳ್ವಾಸ್‍ನ ನವಮಿ, ಕೀರ್ತನಾ, ವರ್ಷ, ಮೇಧಾ ರಾಜೇಶ್, ದೇಚಮ್ಮ ಅವರನ್ನು ಒಳಗೊಂಡ ತಂಡವು ಪ್ರಥಮ ಸ್ಥಾನ ಪಡೆದಿದೆ. ಕ್ರೀಡಾಕೂಟದಲ್ಲಿ ಮಂಗಳೂರು ವಿವಿ ಪ್ರತಿನಿಧಿಸಿದ್ದ 35 ವಿದ್ಯಾರ್ಥಿಗಳಲ್ಲಿ ಆಳ್ವಾಸ್‍ನ 30 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕ್ರೀಡಾ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಾಗಿದ್ದಾರೆ. ಇತ್ತೀಚೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿಯೂ ಮಂಗಳೂರು ವಿವಿ ಪುರುಷರ ತಂಡವು ಚಾಂಪಿಯನ್‍ಶಿಪ್ ಗಳಿಸಿತ್ತು. ವಿಜೇತ ತಂಡದ 42 ವಿದ್ಯಾರ್ಥಿಗಳಲ್ಲಿ 36 ಕ್ರೀಡಾಪಟಗಳು ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದರು.
ಜೂ. 26ರಿಂದ ಜು. 6ರವೆರೆಗೆ ಚೀನಾದಲ್ಲಿ ನಡೆಯಲಿರುವ ವಲ್ರ್ಡ್ ಯೂನಿವರ್ಸಿಟಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ರಿಲೇ, ಲಾಂಗ್‍ಜಂಪ್, ಹಾಫ್ ಮ್ಯಾರಥಾನ್ ಹಾಗೂ ಜಾವೆಲಿನ್ ಥ್ರೋ ವಿಭಾಗದಲ್ಲಿ ಕ್ರಮವಾಗಿ ಆಳ್ವಾಸ್‍ನ ಲಿನೆಟ್, ಶೃತಿಲಕ್ಷ್ಮೀ, ಲಕ್ಷ್ಮೀ, ಕರೀಷ್ಮಾ ಸನಿಲ್ ಅರ್ಹತೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸಲು 23 ಪುರುಷರು ಹಾಗೂ 12 ಮಹಿಳಾ ಕ್ರೀಡಾಪಟುಗಳು ಆಯ್ಕೆಗೊಂಡಿದ್ದಾರೆ. ಈ ಮೂಲಕ ದೇಶದ 1044 ವಿವಿಗಳ, ಸುಮಾರು 45,000 ಕಾಲೇಜುಗಳ ಪೈಕಿ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಆಳ್ವಾಸ್ ಪಾತ್ರವಾಗಿದೆ.
ಪುರುಷರ ಅಥ್ಲೆಟಿಕ್ ಕ್ರೀಡಾಕೂಟದಲ್ಲೂ ಸಾಧನೆ ಮೆರೆದಿದ್ದ ಆಳ್ವಾಸ್
ಇತ್ತೀಚೆಗೆ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದಿದ್ದ 81ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿಯೂ ಮಂಗಳೂರು ವಿವಿ ಚಾಂಪಿಯನ್‍ಶಿಪ್ ಗಳಿಸಿತ್ತು. 2 ಕೂಟ ದಾಖಲೆಗಳೊಂದಿಗೆ 6 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕ ಸೇರಿದಂತೆ ಒಟ್ಟು 16 ಪದಕಗಳನ್ನು ಪಡೆದಿತ್ತು. ಈ ಸಾಧನೆ ಮೆರೆದ ವಿದ್ಯಾರ್ಥಿಗಳೆಲ್ಲರೂ ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳೆನ್ನುವುದು ವಿಶೇಷವಾಗಿದೆ.