ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೆಂಕು-ಬಡಗುತಿಟ್ಟಿನಲ್ಲಿ ಸುದೀರ್ಘ 40 ವರ್ಷಗಳ ಕಾಲ ಸೇವೆಗೈದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ವಂಡ್ಸೆ ನಾರಾಯಣ ಗಾಣಿಗರ ಸ್ಮರಣಾರ್ಥವಾಗಿ ಪ್ರಶಸ್ತಿ ಸ್ಥಾಪಿಸಲಾಗಿದ್ದು, 2022ನೇ ಸಾಲಿನ ‘ವಂಡ್ಸೆ ನಾರಾಯಣ ಪ್ರಶಸ್ತಿ’ಗೆ ಬಡಗುತಿಟ್ಟಿನ ಹಿರಿಯ ಹಾಸ್ಯಕಲಾವಿದ ಹೊಳ್ಮಗೆ ನಾಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಮಾರ್ಚ್ 5 ಶನಿವಾರ ವಂಡ್ಸೆಯ ತಿರುಮಲ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ ಮಧ್ಯಾಹ್ನ 2:30ರಿಂದ ದೇವಳದ ಆಶ್ರಯದಲ್ಲಿ ನಡೆಯುವ ತಾಳಮದ್ದಲೆ ಕಾರ್ಯಕ್ರಮದಲ್ಲಿ ನಾರಾಯಣ ಗಾಣಿಗರ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಹಿರಿಯ ಪ್ರಸಂಗಕರ್ತರಾದ ಕಂದಾವರ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗಿಳಿಯಾರು ಶ್ರೀಧರ ಶೆಟ್ಟಿ, ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ ತಿಳಿಸಿದ್ದಾರೆ.
ಬಡಗುತಿಟ್ಟಿನ ತೆರೆಮರೆಯ ಹಿರಿಯ ಕಲಾವಿದ ಹೊಳ್ಮಗೆ ನಾಗಪ್ಪನವರು ಸುಮಾರು 60ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷತಿರುಗಾಟ ನಿರತರಾಗಿದ್ದಾರೆ. ಪ್ರಸ್ತುತ ಕೋಟದ ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹಕ್ಲಾಡಿ ಗ್ರಾಮದ ಹೊಳ್ಮಗೆ ಎಂಬಲ್ಲಿ ದೊಟ್ಟಿ ನಾಯ್ಕ ಹಾಗೂ ಚಂದು ಮೊಗೇರ್ತಿ ದಂಪತಿಗಳ ಪುತ್ರರಾಗಿ ಜನಿಸಿದ ಇವರು ಹಕ್ಲಾಡಿ ಕುಂದಬಾರಂದಾಡಿ ಪ್ರಾಥಮಿಕ ಶಾಲೆಯಲ್ಲಿ ಮೂರನೆ ತರಗತಿಯವರೆಗೆ ಅಕ್ಷರಭ್ಯಾಸ ಮಾಡಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಮೇಲಿನ ಆಸಕ್ತಿಯಿಂದ ಬೇಲ್ತೂರು ಕುಷ್ಟ ನಾಯ್ಕ ಗುರುತನದಲ್ಲಿ ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಅಭ್ಯಾಸಿಸಿ, ಅಂದಿನ ಪ್ರಸಿದ್ಧ ಹಾಸ್ಯಕಲಾವಿದ ವಂಡ್ಸೆ ನಾಗಯ್ಯ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತನ್ನ ೧೦ನೇ ವಯಸ್ಸಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಉಡುಪಿಯ ಯಕ್ಷಗಾನ ಕೇಂದ್ರದ ಪ್ರಥಮ ವರ್ಷದ ವಿದ್ಯಾರ್ಥಿಯಾಗಿ ಸೇರ್ಪಡೆಗೊಂಡರು. ದಶಾವತಾರಿ ಗುರು ಎನಿಸಿದ ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲಯ್ಯನವರ ಗುರುಬಲವನ್ನು ಸಂಪಾದಿಸಿದರು. ಹಾಸ್ಯಗಾರಿಕೆಯಲ್ಲಿಯೇ ಪ್ರೌಢಿಮೆ ಸಂಪಾದಿಸಿ, ಅದರಲ್ಲಿಯೇ ಮುಂದುವರಿದರು.
ಕೊರ್ಗು ಹಾಸ್ಯಗಾರರು, ನಾವುಂದ ದೇವಪ್ಪ ಗಾಣಿಗ ಹಾಸ್ಯಗಾರರು, ಕೆಮ್ಮಣ್ಣು ವಿಠಲ ಶೆಟ್ಟಿಯವರು, ಕುಂಜಾಲು ರಾಮಕೃಷ್ಣ ಹಾಸ್ಯಗಾರರು, ಸಾಲ್ಕೋಡು ಗಣಪತಿ ಹೆಗಡೆಯವರು, ಬೋಳಪ್ಪ ಹಾಸ್ಯಗಾರರು, ಉದ್ಯಾವರ ಮುಂತಾದ ಹಿರಿಯರೊಂದಿಗಿನ ಒಡನಾಟ ಇವರ ವೃತ್ತಿ ಬದುಕಿಗೆ ಬಹುದೊಡ್ಡ ಕೊಡುಗೆಯಾಯಿತು. ಮಾರಣಕಟ್ಟೆ, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಹಾಲಾಡಿ, ಸೌಕೂರು, ಬಗ್ವಾಡಿ, ಗೋಳಿಗರಡಿ, ಮೇಗರವಳ್ಳಿ, ಮಡಾಮಕ್ಕಿ, ಹೆಗ್ಗೋಡು, ಮಂದಾರ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ್ದು, ಪ್ರಸ್ತುತ ಅಮೃತೇಶ್ವರಿ ಮೇಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಭೀಷ್ಮ ಪ್ರತಿಜ್ಞೆಯ ಕಂದರ, ನಳ ದಮಯಂತಿಯ ಬಾಹುಕ, ಚಿತ್ರಪಟದಲ್ಲಿ ಕೊರವಂಜಿ, ಚಂದ್ರಾವಳಿಯ ಅಜ್ಜಿ, ಕೃಷ್ಣಲೀಲೆಯ ವಿಜಯ, ಕಂಸವಧೆಯ ರಜಕ, ಪಾಪ್ಪಣ್ಣ ವಿಜಯದ ಪಾಪಣ್ಣ, ಚಂದ್ರಹಾಸದ ಬ್ರಾಹ್ಮಣ, ದೇವಿ ಮಹಾತ್ಮೆಯ ಮಾಲಿನಿ ದೂತ, ನಾಗಶ್ರೀಯ ಕೈರವ, ಶ್ರೀ ಕೃಷ್ಣ ಗಾರುಡಿ, ಮಾಯಾಜಾಲ, ಸುಭದ್ರ ಕಲ್ಯಾಣ ಮುಂತಾದ ಪ್ರಸಂಗಗಳಲ್ಲಿ ಬಹು ಭಾಷೆಯ ಪ್ರಯೋಗ, ಕೇರಳ ಮಾಂತ್ರಿಕ ಹೀಗೆ ಹಾಸ್ಯ ಪಾತ್ರಗಳಲ್ಲಿ ಹೊಳ್ಮಗೆ ತನ್ನದೇ ಛಾಪು ಒತ್ತಿದ್ದಾರೆ.
ಬಯಲಾಟ ಮೇಳದ ಹಿರಿಯ ಕಲಾವಿದ ಹೊಳ್ಮಗೆ ನಾಗಪ್ಪ ಅವರಿಗೆ ಯೋಗ್ಯವಾಗಿಯೇ ಪ್ರಶಸ್ತಿ ಸಲ್ಲುತ್ತಿದೆ.