ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಫೆ.28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಂಡ್ಸೆ ವಲಯ ಮತ್ತು ಭಜನಾ ಪರಿಷತ್ ವಂಡ್ಸೆ ವಲಯ ಇವರ ಜಂಟಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಹಾಗು 10 ಮಹಿಳಾ ಭಜನಾ ಮಂಡಳಿ ಉದ್ಘಾಟನೆ ವಂಡ್ಸೆ ನೂಜಾಡಿ ಕ್ರಾಸ್‌ನಲ್ಲಿರುವ ಮಹಾತ್ಮ ಗಾಂಧಿ ಸಭಾ ಭವನದಲ್ಲಿ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಧ.ಗ್ರಾ ಯೋಜನೆ ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕರಾದ ಗಣೇಶ್ ಬಿ ಮಾತನಾಡಿ, ವ್ಯಕ್ತಿ ಸರಿಯಾದರೆ ದೇಶವೇ ಸರಿಯಾಗುತ್ತದೆ ಎನ್ನುವ ಕಲ್ಪನೆಯಲ್ಲಿ ನಾವಿಂದು ಸಾಗಬೇಕಾಗಿದೆ. ಧಾರ್ಮಿಕ ಕಾರ್ಯಕ್ರಮಗಳಿಂದ ಒಗ್ಗಟ್ಟು, ಸಂಸ್ಕೃತಿ, ಸಂಸ್ಕಾರವನ್ನು ಕಂಡುಕೊಳ್ಳಲು ಸಾಧ್ಯ. ಭಜನೆಯ ಮೂಲಕ ಬದುಕಿನಲ್ಲಿ ಪ್ರಜ್ಞಾವಂತಿಕೆ ಜೀವನಾದರ್ಶಗಳನ್ನು ಬೆಳೆಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯ ಎಂದರು.
ಜನಜಾಗೃತಿ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ ಅವರು ವಲಯದ ೧೦ ಮಹಿಳಾ ಭಜನಾ ಮಂಡಳಿಗಳ ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮಗಳು ಹೊಸ ಪರಿವರ್ತನೆಗೆ ಕಾರಣವಾಗಿದೆ. ಹಿಂದೆ ಪ್ರತಿ ಮನೆಯಲ್ಲಿ ಭಜನೆಯ ತಾಳದ ಸದ್ದು ಕೇಳಿ ಬರುತ್ತಿತ್ತು. ಇವತ್ತು ಆ ಸ್ಥಾನವನ್ನು ಮೊಬೈಲ್, ಧಾರವಾಹಿಗಳು ಆಕ್ರಮಿಸಿಕೊಂಡಿವೆ. ಅದು ಬದಲಾಗಬೇಕಿದೆ. ನಮ್ಮ ಮಕ್ಕಳಿಗೆ ಭಜನೆಯ ಮಹತ್ವವನ್ನು ಪೋಷಕರು ತಿಳಿಸಿಕೊಡುವ ಮೂಲಕ ಸಂಸ್ಕೃತಿ, ಸಂಸ್ಕಾರದ ಅರಿವನ್ನು ಮೂಡಿಸಬೇಕಾಗಿದೆ ಎಂದರು.
ಹೈದರಬಾದ್ ಉದ್ಯಮಿ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ತಿರುಮಲ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಗಿಳಿಯಾರು ಶ್ರೀಧರ ಶೆಟ್ಟಿ, ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ವಿ.ಕೆ ಶಿವರಾಮ ಶೆಟ್ಟಿ, ಜನಜಾಗೃತಿ ವೇದಿಕೆಯ ವಂಡ್ಸೆ ವಲಯ ಅಧ್ಯಕ್ಷ ಸತೀಶ ಎಮ್.ನಾಯಕ್, ಪ್ರ.ಬಂ.ಸ್ವ-ಸಹಾಯ ಸಂಘಗಳ ವಂಡ್ಸೆ ವಲಯ ಒಕ್ಕೂಟದ ಅಧ್ಯಕ್ಷೆ ವೀಣಾ ಆಚಾರ್ಯ, ಶ್ರೀ ಕ್ಷೇತ್ರ ಮಂಜುನಾಥೇಶ್ವರ ಭಜನಾ ಪರಿಷತ್ ವಂಡ್ಸೆ ವಲಯ ಅಧ್ಯಕ್ಷ ಸದಾನಂದ ಆಚಾರ್ಯ, ಕೃಷ್ಣ ಪೂಜಾರಿ, ವಂಡ್ಸೆ ಒಕ್ಕೂಟದ ಅಧ್ಯಕ್ಷ ಗಿರೀಶ್ ಎನ್.ನಾಯ್ಕ್ ಉಪಸ್ಥಿತರಿದ್ದರು.
ವೇ.ಮೂ.ದಿನಕರ ಉಡುಪ ಹರವರಿ ಅವರ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ಥಳೀಯ ಗಾಯನ ಪ್ರತಿಭೆ ತನುಷಾ ಎಸ್.ಕುಂದರ್ ಹಾಗೂ ಸಿದ್ದಾಪುರ ಭಜನಾ ಪರಿಷತ್ ಸಂಯೋಜಕ ರಘು ಕುಲಾಲ್ ಹಾಗೂ ವಲಯದ ಎಲ್ಲಾ ಸೇವಾಪ್ರತಿನಿಧಿಗಳನ್ನು ಅಭಿನಂದಿಸಲಾಯಿತು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ ಶಶಿರೇಖಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರು ಅತಿಥಿಗಳನ್ನು ಗೌರವಿಸಿದರು. ವಂಡ್ಸೆ ವಲಯ ಮೇಲ್ವಿಚಾರಕಿ ಪಾರ್ವತಿ ವಂದಿಸಿದರು. ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ನೂತನ ಭಜನಾ ಮಂಡಳಿ ಸದಸ್ಯರಿಂದ ಪ್ರಾತ್ಯಕ್ಷಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.