ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಲಿಂಗ ಸ್ಪರ್ಶಪೂಜೆಗೆ ಅವಕಾಶವಿರುವ ಬೈಂದೂರು ತಾಲೂಕಿನ ಗಂಗಾನಾಡು ಗ್ರಾಮದ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಮಹಾಶಿವರಾತ್ರಿ ಮಹೋತ್ಸವದಂದು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು.
ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮರುದಿನ ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತದೆ.
ಗರ್ಭಗುಡಿಯೊಳಕ್ಕೆ ಶಿವಲಿಂಗ ಸ್ವರ್ಶಿಸುವ ಭಕ್ತರಿಗೆ ದೇವಳದ ಕೆರೆಯಲ್ಲಿ ಸ್ನಾನ ಮಾಡುವುದು ಕಡ್ಡಾಯವಾಗಿತ್ತು. ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಸ್ನಾಹಗೃಹ ನಿರ್ಮಿಸಲಾಗಿತ್ತು. ಗರ್ಭಗುಡಿ ಪ್ರವೇಶಿಸದ ಭಕ್ತರು ನಂದಿ ಮಂಟಪದಲ್ಲಿ ಇರಿಸಲಾದ ದೇವರ ಉತ್ಸವ ಮೂರ್ತಿ ಸ್ಪರ್ಶಿಸಿ ಪುನೀತರಾದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ .ರಾಜಮೋಹನ್ ಶೆಟ್ಟಿ ಡಾ. ಮಿಥುನ್ ಶೆಟ್ಟಿ, ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು ಶಿಸ್ತು ವ್ಯವಸ್ಥೆಯನ್ನು ಕೈಗೊಂಡಿದ್ದರು. ಸ್ಥಳೀಯ ಉತ್ಸಾಹೀ ಯುವಕರು ಸ್ವಯಂಸೇವಕರಾಗಿ ಉತ್ಸವದ ಯಶಸ್ಸಿಗೆ ಸಹಕರಿಸಿದರು. /ಕುಂದಾಪ್ರ ಡಾಟ್ ಕಾಂ/
ಐತಿಹ್ಯ:
ವಿಶಿಷ್ಟ ಕ್ಷೇತ್ರ:ಕ್ರಿ. ಶ. 958ನೇ ಇಸವಿಯಲ್ಲಿ ರಾಜಾಶ್ರಯವನ್ನು ಪಡೆದಿದ್ದ ದೇಗುಲವೆನ್ನಲಾದ ವನಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಶಿವಲಿಂಗ ಸ್ಪರ್ಶ ಪೂಜೆಯ ವಿಶಿಷ್ಟ ಕ್ಷೇತ್ರವೆನಿಸಿದೆ. ಮಹಾಶಿವರಾತ್ರಿ ದಿನವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಅರ್ಚಕರಿಂದ ದೇಗುಲದಲ್ಲಿ ಪೂಜೆ ನಡೆಯುತ್ತದೆ. ಮಹಾಶಿವರಾತ್ರಿಯಂದು ಈ ದೇಗುಲಕ್ಕೆ ಹರಿದು ಬರುವ ಭಕ್ತ ಜನಸಾಗರವು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಮುಟ್ಟಿ ಪೂಜಿಸಿ ಪುಲಕಿತರಾಗುವ ಪುಣ್ಯಾವಕಾಶವನ್ನು ಪಡೆಯುತ್ತಾರೆ. ಆದ್ದರಿಂದ ಈ ಕ್ಷೇತ್ರ ಎರಡನೆಯ ಗೋಕರ್ಣ ಎಂದೂ ಕರೆಯಲ್ಪಟ್ಟಿದೆ. ದೇವಸ್ಥಾನದ ಮುಂಭಾಗದಲ್ಲಿರುವ ವಿಶಾಲವಾದ ಪುಷ್ಕರಿಣಿಯ ಪವಿತ್ರ ಜಲವು ಗಂಗಾ ನದಿಯಿಂದ ಹರಿದು ಬರುವ ಒರತೆ ಎಂಬ ಪ್ರತೀತಿಯಿದೆ. ಗಂಗೆಯ ನಾಳ ಹರಿದು ಬರುವುದರಿಂದ ಈ ಪ್ರದೇಶವು ಗಂಗಾನಾಡು ಎಂದು ಕರೆಯಲ್ಪಟ್ಟಿದೆ ಎನ್ನಲಾಗುತ್ತದೆ.
ಶಿವಸಾನ್ನಿಧ್ಯ:
ಪುರಾತನವಾದ ಈ ದೇವಸ್ಥಾನದಲ್ಲಿ ಪಾರ್ವತಿ, ಗಣಪತಿ ಸಹಿತ ಶಿವ ಸಾನ್ನಿಧ್ಯವಿದೆ. ದೇಗುಲದ ಹೊರಭಾಗದಲ್ಲಿ ನಾಗದೇವರ ಸಾನ್ನಿಧ್ಯವಿದೆ. ಪುಷ್ಕರಿಣಿ, ಬಲಿಕಲ್ಲು, ಧ್ವಜಪೀಠ ಮೊದಲಾದುವುಗಳಿವೆ. ಶಿವರಾತ್ರಿ ಉತ್ಸವವು ಇಲ್ಲಿನ ಅತ್ಯಂತ ಸಂಭ್ರಮದ ಆಚರಣೆಯಾಗಿ ಖ್ಯಾತವಾಗಿದೆ. ನವರಾತ್ರಿ ಉತ್ಸವ, ದೀಪದ ಅಮಾವಾಸ್ಯೆಯನ್ನು ಇಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ
ರಾಜಾಶ್ರಯ ತಪ್ಪಿದ ಬಳಿಕ ಸ್ವಲ್ಪಮಟ್ಟಿಗೆ ಕಳಾಹೀನವಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸ್ಥಳೀಯ ಯಡ್ತರೆ ಮನೆತನದವರು ಹಂತ ಹಂತವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಭಕ್ತರ ಅನುಕೂಲಕ್ಕಾಗಿ ದೇವಾಲಯದಲ್ಲಿ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಈ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಡಾ. ರಾಜಮೋಹನ ಶೆಟ್ಟಿ ಅವರ ನೇತೃತ್ವದಲ್ಲಿ ನವೀಕೃತ ದೇಗುಲ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. /ಕುಂದಾಪ್ರ ಡಾಟ್ ಕಾಂ/
ಕುಂದಾಪ್ರ ಬೈಂದೂರು ತಾಲೂಕಿನ ಪ್ರಮುಖ ಶಿವ ದೇವಾಲಯಗಳು
► ಗುಜ್ಜಾಡಿ: ಗುಹೆಯೊಳಕ್ಕೆ ಉದ್ಭವಿಸಿಹ ಗುಹೇಶ್ವರನ ಸಾನಿಧ್ಯವೇ ಬೆರಗು – http://kundapraa.com/?p=11872
► ಕುಂದಾಪುರದ ಅಧಿದೇವ ಶ್ರೀ ಕುಂದೇಶ್ವರ – http://kundapraa.com/?p=1504
► ಪುರಾಣ ಪ್ರಸಿದ್ಧ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ – http://kundapraa.com/?p=1512
► ಬೈಂದೂರು: ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ ಕ್ಷೇತ್ರ ವಣಕೊಡ್ಲು – http://kundapraa.com/?p=11836
► ಮಾತನಾಡುವ ಮಹಾಲಿಂಗ ಉಳ್ತೂರು ಶ್ರೀ ಮಹಾಲಿಂಗೇಶ್ವರ – http://kundapraa.com/?p=21169
► ಇತಿಹಾಸ ಪ್ರಸಿದ್ಧ ಬೈಂದೂರು ಶ್ರೀ ಸೇನೆಶ್ವರ ದೇವಸ್ಥಾನ – http://kundapraa.com/?p=1526
► ಶ್ರೀ ಕ್ರೋಢ ಶಂಕರನಾರಾಯಣ ದೇವಸ್ಥಾನ – http://kundapraa.com/?p=1514
► ಮೂಡುಗಲ್ಲು: ವಿಸ್ಮಯಕಾರಿ ಗುಹಾಂತರ ಕೇಶವನಾಥ ದೇವಾಲಯ – http://kundapraa.com/?p=1522