ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಬೈಂದೂರು ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಸರಕಾರದಿಂದ ಸುಮಾರು 2 ಸಾವಿರ ಕೋಟಿ ರೂ. ಅನುದಾನ ಬಂದಿದ್ದು, ರಸ್ತೆ, ಕುಡಿಯುವ ನೀರು, ಶಾಲೆ ಕಟ್ಟಡ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಗ್ರಾಮದ ಅಭಿವೃದ್ಧಿ ಕಡೆಗೂ ಗಮನ ನೀಡಲಾಗಿದ್ದು, ಮೀನುಗಾರಿಕಾ ಜೆಟ್ಟಿ ಪುನರ್ ನಿರ್ಮಾಣ, ಚರಂಡಿಗಳ ಅಭಿವೃದ್ಧಿ, ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಮಾಡಲಾಗಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು.
ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗೇಶ್ವರ ದೇವಸ್ಥಾನದ ಬಳಿ ವಾರಾಹಿ ನೀರಾವರಿ ಇಲಾಖೆ ಮೂಲಕ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕೊಂಕಣ ಖಾರ್ವಿ ಸಮುದಾಯ ಭವನಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೀನುಗಾರಿಕೆಯನ್ನೇ ನಂಬಿ ಬಹಳ ಕಷ್ಟದಿಂದ ಜೀವನ ನಡೆಸುತ್ತಿರುವ ಕೊಂಕಣ ಖಾರ್ವಿ ಸಮುದಾಯದ ಅಗತ್ಯತೆ ಮತ್ತು ಬೇಡಿಕೆಗಳನ್ನು ಆದ್ಯತೆ ಮೇಲೆ ಪೂರೈಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.
ಇದೇ ಸಂದರ್ಭ ಶಾಸಕ ಸುಕುಮಾರ್ ಶೆಟ್ಟಿ ಅವರನ್ನು ದೇವಸ್ಥಾನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇವಸ್ಥಾನದ ಅರ್ಚಕ ಎಸ್.ವೆಂಕಟರಮಣ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ವಾರಾಹಿ ನೀರಾವರಿ ಇಲಾಖೆ ಇಂಜಿನಿಯರ್ ಪ್ರಸನ್ನ ಕಾಮತ್, ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಅಧ್ಯಕ್ಷ ರಾಮಪ್ಪ ಖಾರ್ವಿ, ಮಾಜಿ ಅಧ್ಯಕ್ಷ ಪುರುಷೋತ್ತಮ ಆರ್ಕಾಟಿ, ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪಯ್ಯ ಪಟೇಲ್, ಮಹಿಳಾ ಮಂಡಳಿ ಅಧ್ಯಕ್ಷೆ ಚಂದ್ರಾವತಿ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು, ಗಂಗೊಳ್ಳಿ ಗ್ರಾಪಂ ಸದಸ್ಯರು, ಸಮಿತಿಯ ಸದಸ್ಯರು, ಭಜನಾ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಮಿತಿಯ ಮಾಜಿ ಅಧ್ಯಕ್ಷ ಮಂಜುನಾಥ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.