ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ವಿಹಾರ – ವಿರಾಮಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿಪಡಿಸಿದ ಪಾರ್ಕ್, ಉದ್ಘಾಟನೆಗೂ ಮುನ್ನವೇ ಮದ್ಯ ವ್ಯಸನಿಗಳ ಅಡ್ಡವಾಗಿ ಪರಿಣಮಿಸಿದೆ. ಕುಂದಾಪುರ ಪುರಸಭಾ ಅಧ್ಯಕ್ಷರೇ ಪ್ರತಿನಿಧಿಸುವ ಟಿಟಿ ರಸ್ತೆ ವಾರ್ಡಿನಲ್ಲಿರುವ ಉದ್ಯಾನವನವೀಗ ನಿರುಪಯುಕ್ತ ತಾಣವಾಗಿ ಮಾರ್ಪಾಡಾಗಿದೆ.
ಟಿಟಿ ರಸ್ತೆಯ ಪ್ರಮುಖ ಹಾದಿಯಲ್ಲಿಯೇ ಇರುವ, ಇನ್ನು ಹೆಸರಿಡದ ಪಾರ್ಕ್ ಹೊರಗಿನಿಂದ ನೋಡಲಷ್ಟೇ ವಿಹಾರ ತಾಣವೆನಿಸುತ್ತದೆ. ಒಳಭಾಗದಲ್ಲಿ ಇಣುಕಿದರೆ ಅಲ್ಲಿನ ನಿಜಬಣ್ಣ ಬಯಲಾಗುತ್ತೆ. ರಾಶಿ ರಾಶಿ ಮಧ್ಯದ ಬಾಟಲಿಗಳು, ಸಿಗರೇಟು, ಕಸದ ರಾಶಿ, ಸುತ್ತಲೂ ಬೆಳೆದ ಗಿಡಗಂಟಿ ಪಾರ್ಕಿನ ಅಂದಗೆಡಿಸಿಬಿಟ್ಟಿದೆ. ಪಾರ್ಕ್ ಒಳಗೆ ಕುಳಿತು ಮದ್ಯವ್ಯಸನ ಮಾಡುವ ಘಟನೆಗಳು ನಡೆಯುತಿದ್ದು, ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವುದು ಕೂಡ ಕಷ್ಟವೆನಿಸಿದೆ ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ.
ಅಭಿವೃದ್ಧಿಗೊಳಿಸಿ 2ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯವಿಲ್ಲ:
ಈ ಭಾಗದ ಸಾರ್ವಜನಿಕರು ಹಾಗೂ ಮಕ್ಕಳ ಉಪಯೋಗಕ್ಕಾಗಿ ಟಿಟಿ ರಸ್ತೆಯ ಬೃಹತ್ ವಾಟರ್ ಟ್ಯಾಂಕ್ ಪಕ್ಕದ ಖಾಲಿ ಜಾಗದಲ್ಲಿ ಪಾರ್ಕ್ ನಿರ್ಮಿಸಲಾಗಿತ್ತು. ಆದರೆ ಕಾಮಗಾರಿ ಬಹುಪಾಲು ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಮೀನಾಮೇಷ ಎಣಿಸಲಾಗುತ್ತಿದೆ. ಪಾರ್ಕಿನಲ್ಲಿ ಲೈಟ್ ವ್ಯವಸ್ಥೆ, ಗೇಟ್, ಮಕ್ಕಳ ಜೋಕಾಲಿ, ಇಂಟರ್‌ಲಾಕ್, ಸಿಸಿ ಕ್ಯಾಮರಾ ಅಳವಡಿಕೆ ಇನ್ನೂ ಬಾಕಿ ಇದ್ದು ರಾತ್ರಿ ಸಂಚಾರವೂ ಕಷ್ಟವೆನಿಸಿದೆ.
ಒಟ್ಟಿನಲ್ಲಿ ಸ್ವಚ್ಛ ಕುಂದಾಪುರ ಎಂಬ ಖ್ಯಾತಿ ಗಳಿಸಿರುವ ನಗರದ ಪ್ರಮುಖ ಭಾಗದಲ್ಲಿಯೇ ಇರುವ ಪಾರ್ಕ್ ಪಾಳು ಬಿದ್ದಿರುವುದು ನಗರಕ್ಕೆ ಕಪ್ಪು ಚುಕ್ಕಿಯೆನಿಸಿದೆ.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಾರ್ಕ್ ಅಭಿವೃದ್ಧಿಪಡಿಸಲಾಗಿದ್ದು, ಕೆಲವು ಕಿಡಿಗೇಡಿಗಳು ಪಾರ್ಕ್‌ನ ಕಂಪೌಂಡ್ ವಾಲ್ ಹಾಗೂ ಒಳಭಾಗದಲ್ಲಿ ಹಾನಿ ಮಾಡಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಇತ್ತಿಚಿಗೆ ಹೈಮಸ್ಟ್ ದೀಪ ಅಳವಡಿಕೆ ಮಾಡಿದ್ದು, ಅನುದಾನ ಲಭ್ಯತೆ ನೋಡಿಕೊಂಡು ಲೈವ್ ಟ್ರ್ಯಾಕಿಂಗ್ ಇರುವ ಸಿಸಿ ಟಿವಿ ಅಳವಡಿಸಿ ಬಳಿಕ ಸಾರ್ವಜನಿಕರ ಉಪಯೋಗಕ್ಕೆ ತೆರೆಯಲಾಗುವುದು – ವೀಣಾ ಭಾಸ್ಕರ್, ಅಧ್ಯಕ್ಷರು ಪುರಸಭೆ ಕುಂದಾಪುರ
ಕುಂದಾಪುರ ಪುರಸಭೆ ಹಂತ ಹಂತವಾಗಿ ಪಾರ್ಕ್ ಅಭಿವೃದ್ಧಿಗೊಳಿಸಿದ್ದು, ಕೆಲವು ಕಾಮಗಾರಿಗಳು ಬಾಕಿ ಇರುವುದರಿಂದ ಉದ್ಘಾಟನೆಗೊಂಡಿಲ್ಲ. ಎರಡು ವರ್ಷಗಳ ಹಿಂದೆ ಕಂಪೌಂಡ್ ವಾಲ್ ನಿರ್ಮಿಸಲಾಗಿದ್ದು, ಪಾರ್ಕ್ ಒಳಕ್ಕೆ ಕೆಲವೆಡೆ ಇಂಟರ್‌ಲಾಕ್ ಅಳವಡಿಕೆ, ಗಿಡಗಳನ್ನು ನೆಡಿಸುವುದು ಬಾಕಿ ಇದೆ. ಪಕ್ಕದ ವಾಟರ್ ಟ್ಯಾಂಕ್ ಪೈಪ್‌ಲೈನ್ ಅಳವಡಿಕೆ ಹಾಗೂ ಕೋವಿಡ್ ಕಾರಣದಿಂದ ಕೆಲಸ ವಿಳಂಬವಾಗಿತ್ತು. ಲಭ್ಯವಿರುವ ಅನುದಾನವನ್ನು ನೋಡಿಕೊಂಡು ಅಭಿವೃದ್ಧಿಗೊಳಿಸಲಾಗುವುದು. – ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ ಕುಂದಾಪುರ