ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ,ಮಾ.19: ಇಲ್ಲಿನ ಕೊಂಕಣಿ ಖಾರ್ವಿ ಸಮಾಜ ಬಾಂಧವರ ಬಹುದೊಡ್ಡ ಆಚರಣೆ ಹೋಳಿಯನ್ನು ವಾರಗಳ ಕಾಲ ಅದ್ದೂರಿಯಾಗಿ ಆಚರಿಸಲಾಗಿದ್ದು ಕೊನೆಯ ದಿನ ಹೋಳಿ ಓಕುಳಿ ಹಾಗೂ ಬೃಹತ್ ಪುರಮೆರವಣಿಗೆಯೊಂದಿಗೆ ಸಮಾಪನಗೊಂಡಿತು.
ಜನಪದ ವಾದ್ಯ ಗುಮಟೆ, ಚೆಂಡೆ ವಾದನ, ಹೋಳಿ ನೃತ್ಯ ಮನ ಸೆಳೆದರೇ, ಶಿವನ ಸ್ತಬ್ಧಚಿತ್ರ ಹೋಳಿ ಮೆರವಣಿಗೆಯ ಕಳೆ ಹೆಚ್ಚಿಸಿತು. ಎರಡು ತಾಸಿಗೂ ಮಿಕ್ಕಿ ನಡೆದ ಮೆರವಣಿಗೆಯಲ್ಲಿ ಕೊಂಕಣಿ ಖಾರ್ವಿ ಸಮಾಜದ ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಊರವರು ಪರಸ್ಪರ ಬಣ್ಣ ಎರಚಿಕೊಂಡು ಬಣ್ಣದ ಹಬ್ಬದ ರಂಗು ತುಂಬಿದರು. ಮೆರವಣಿಗೆಯುದ್ದಕ್ಕೂ ಮೊಳಗಿದ ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಸಾರ್ವಜನಿಕರೂ ಕೂಡ ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಅಂತಾರಾಷ್ಟ್ರೀಯ ಎಫ್ಎಸ್ಎಲ್ ಸೇವಾ ಸಂಸ್ಥೆಯ ವಿದೇಶಿ ಸ್ವಯಂಸೇವಕರು ಹೋಳಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು ವಿಶೇಷವಾಗಿತ್ತು. ಮೆರವಣಿಗೆಯ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋವಸ್ತ್ ಮಾಡಲಾಗಿತ್ತು.
ಕೊಂಕಣಿ ಖಾರ್ವಿ ಜನಾಂಗದ ವೈಶಿಷ್ಟ್ಯಪೂರ್ಣ ಆಚರಣೆ ಹೋಳಿ:
ಕುಂದಾಪುರ ಹಾಗೂ ಗಂಗೊಳ್ಳಿ ಭಾಗದಲ್ಲಿ ನೆಲೆಸಿರುವ ಕೊಂಕಣಿ ಭಾಷಿಕ ಖಾರ್ವಿ ಸಮುದಾಯದ ಬಹುದೊಡ್ಡ ಹಬ್ಬ ಹೋಳಿ. ಸಮಾಜದ ಏಳಿಗೆಗೆ ಈ ಸಂಪ್ರದಾಯವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಬೇಕೆಂಬುದನ್ನು ಈ ಜನಾಂಗದ ಪ್ರತಿಯೊಬ್ಬರೂ ಬಲವಾಗಿ ನಂಬಿದ್ದಾರೆ. ಅದರಂತೆಯೇ ಶಿವರಾತ್ರಿಯ ಬಳಿಕ ಹೊಳಿ ಹಬ್ಬದ ತಯಾರಿಗಳು ನಡೆಯುತ್ತದೆ. ಕುಂದಾಪುರದ ಕೊಂಕಣಿ ಖಾರ್ವಿ ಜನಾಂಗದವರು ಊರಿನ ಅಧಿದೇವರಾದ ಶ್ರೀ ಕುಂದೇಶ್ವರನಿಗೆ ಪೂಜೆ ಸಲ್ಲಿಸಿ ದೇವರಿಂದ ಆಜ್ಞಾಪನೆ ದೊರೆತ ಬಳಿಕ ಸಮುದಾಯದ ಪ್ರತಿ ಮನೆಯಲ್ಲಿಯೂ ಹೋಳಿ ಹಬ್ಬದ ವಿಧಿ-ವಿಧಾನಗಳಿಗೆ ಚಾಲನೆ ದೊರೆಯುತ್ತದೆ. ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳುವ ಸಮುದಾಯದ ಪುರುಷರು ಗುಮಟೆ ಬಾರಿಸುತ್ತಾ ಹಾಡು, ನೃತ್ಯ ಮಾಡುತ್ತಾರೆ. ಮೂರನೆಯ ದಿನ ಸಮುದಾಯದವರು ಒಟ್ಟಾಗಿ ವೆಂಕಟರಮಣ ದೇವರ ದರ್ಶನ ಪಡೆಯುವುದು ವಾಡಿಕೆ. ಹೊಳಿ ಹಬ್ಬದಲ್ಲಿ ನಾಲ್ಕನೇ ದಿನ ಹೋಳಿ ದಹನ ಪ್ರಕ್ರಿಯ ವಿಶಿಷ್ಟವಾಗಿ ನಡೆಯುತ್ತದೆ. ಹೊಳಿ ಆಚರಣೆಯ ಕೊನೆಯ ದಿನ ಕೊಂಕಣಿ ಖಾರ್ವಿ ಸಮಾಜದ ಸಾವಿರಾರು ಬಂಧುಗಳು ಹೋಳಿ ಓಕುಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಸಮಾಜದ ಹಿರಿಯರು ಕಿರಿಯರು, ಪುರುಷ ಮಹಿಳೆಯರೆನ್ನದೇ ಪ್ರತಿಯೊಬ್ಬರೂ ಹೋಳಿ ಆಚರಣೆಯಲ್ಲಿ ಭಾಗವಹಿಸಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ.
















